

ಕೊಪ್ಪಳ: ನಿರಂತರ ಮಳೆಯಿಂದ ನಗರದಲ್ಲಿ ಸಾಕಷ್ಟು ಅವಾಂತರಗಳಾಗಿವೆ. ಗುರುವಾರ ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ವಿವಿಧ ವಾರ್ಡ್ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.
ಕುವೆಂಪು ನಗರ, ಹಮಾಲರ ಕಾಲನಿ, ಗಣೇಶ ತಗ್ಗು, ಕಿನ್ನಾಳ ರಸ್ತೆ, ರೈಲ್ವೆ ನಿಲ್ದಾಣ ಸೇರಿ ವಿವಿಧ ಪ್ರದೇಶಗಳಿಗೆ ತೆರಳಿ ಮಳೆ ನೀರು ಮನೆಗೆ ನುಗ್ಗಿ ಆದ ನಷ್ಟದ ಬಗ್ಗೆ ನಿವಾಸಿಗಳಿಂದ ಕೇಳಿ ತಿಳಿದರು. ಚರಂಡಿ ಸ್ವಚ್ಛಗೊಳಿಸದಿರುವುದು, ಅರೆಬರೆ ನಿರ್ಮಾಣ, ನೀರಿನ ಮೂಲ ಬದಲಾವಣೆ ಮಾಡಿರುವುದರಿಂದ ನೀರು ಮನೆಗೆ ನುಗ್ಗಿದ್ದಾಗಿ ನಿವಾಸಿಗಳು ಅಳಲು ತೋಡಿಕೊಂಡರು. ಕರೆ ಮಾಡಿದರೂ ಅಧಿಕಾರಿಗಳು ಸ್ಪಂದಿಸುವುದಿಲ್ಲ ಎಂದು ದೂರಿದರು. 10ಕ್ಕು ಹೆಚ್ಚು ಗುಡಿಸಲುಗಳಿಗೆ ನೀರು ನುಗ್ಗಿದ್ದು ರಾತ್ರಿಯಿಡಿ ನಿದ್ದೆಯಿಲ್ಲದೆ ಪರದಾಡಿದ ಬಗ್ಗೆ ಅಳಲು ತೋಡಿಕೊಂಡರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ನಿರಂತರ ಮಳೆಯಿಂದ ತೊಂದರೆ ಆಗಿದೆ. ಎಲ್ಲ ಕಡೆಗೆ ಭೇಟಿ ನೀಡಿ ಪರಿಶೀಲಿಸುತ್ತಿರುವೆ. ಎಲ್ಲೆಲ್ಲಿ ಸಮಸ್ಯೆ ಆಗಿದೆ ತಕ್ಷಣವೇ ಪರಿಹಾರ ಕಲ್ಪಿಸಲಾಗುವುದು. ಎಲ್ಲ ಚರಂಡಿಗಳನ್ನು ಸ್ವಚ್ಛಗೊಳಿಸಿ ನೀರು ಸರಾಗವಾಗಿ ಹರಿಯುವಂತೆ ಮಾಡಲು ಅಧಿಕಾರಿಗಳಿಗೆ ನಿದೇಶನ ನೀಡಲಾಗಿದೆ. ರಾಜಕಾಲುವೆ ಒತ್ತುವರಿ ತೆರವು ಮಾಡಲಾಗುವುದು. ಯಾರೇ ಪ್ರಭಾವಿಗಳಿದ್ದರೂ ಕ್ರಮವಾಗಲಿದೆ. ಸ್ವಾಮಿ ವಿವೇಕಾನಂದ ಶಾಲೆ ಬಳಿಯ ರೈಲ್ವೆ ಕೆಳ ಸೇತುವೆ ಅನುದಾನ ಬಂದಿದ್ದು, ಕಾಮಗಾರಿ ಆರಂಭಿಸಲಾಗುವುದು ಎಂದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಕೆಲ ದಿನಗಳಿಂದ ಜಿಲ್ಲೆಯಲ್ಲಿ ಉತ್ತಮ ಮಳೆಯಾಗಿದೆ. ವಾಡಿಕೆಗಿಂತ ಅಧಿಕ ಮಳೆಯಾಗಿದ್ದು, ರೈತರಿಗೆ ಸಂತಸ ತಂದಿದೆ. ಆದರೆ, ಮಳೆ ನೀರು ನುಗ್ಗಿ ನಗರ ಪ್ರದೇಶದಲ್ಲಿ ಜನರಿಗೆ ತೊಂದರೆ ಆಗಿದೆ. ಸಮಸ್ಯೆ ಸರಿಪಡಿಸಲಾಗುವುದು ಎಂದು ತಿಳಿಸಿದರು.
ಮಾಜಿ ಸಂಸದ ಸಂಗಣ್ಣ ಕರಡಿ, ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಅಕ್ಬರ್ ಪಾಷಾ ಪಲ್ಟನ್, ನಗರಸಭೆ ಸದಸ್ಯರಾದ ಅಮ್ಜದ್ ಪಟೇಲ್, ಸಿದ್ದಲಿಂಗಸ್ವಾಮಿ ಹಿರೇಮಠ, ಜಿಲ್ಲಾ ನಗರಾಭಿವೃದ್ಧಿ ಕೋಶದ ಯೋಜನಾ ನಿರ್ದೇಶಕಿ ರೇಷ್ಮಾ ಹಾನಗಲ್, ನಗರಸಭೆ ಪೌರಾಯುಕ್ತರಾದ ಗಣಪತಿ ಪಾಟೀಲ, ತಹಸೀಲ್ದಾರ್ ವಿಠ್ಠಲ ಚೌಗಲಾ ಇತರರಿದ್ದರು.
ಮಹಿಳೆಯರಿಂದ ತರಾಟೆ
ಮಳೆಹಾನಿ ಪ್ರದೇಶ ಭೇಟಿಗೆ ತೆರಳಿದ ವೇಳೆ ಕುವೆಂಪು ನಗರದಲ್ಲಿ ಕೆಲ ಮಹಿಳೆಯರು ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳನ್ನು ತರಾಟೆ ತೆಗೆದುಕೊಂಡರು. ಕಾಲನಿ ನಿರ್ಮಾಣವಾದಾಗಿನಿಂದ ಸಮಸ್ಯೆ ಇದೆ. ಪ್ರತಿ ವರ್ಷ ಮಳೆ ಬಂದಾಗ ನೀರು ಮನೆಗೆ ನುಗ್ಗುತ್ತವೆ. ಸುಮ್ಮನೆ ಬಂದು ಪರಿಹಾರ ಮಾಡುವುದಾಗಿ ಹೇಳುತ್ತೀರಿ. ಯಾವುದೇ ಪರಿಹಾರ ಸಿಗುತ್ತಿಲ್ಲ. ನೋಡಿ ಮಾಧ್ಯಮಗಳಲ್ಲಿ ಸುದ್ದಿ ಪ್ರಕಟಿಸಿದರೆ ಸಮಸ್ಯೆ ಪರಿಹಾರವಾಗುವುದಿಲ್ಲ. ಇಲ್ಲೇ ಇದ್ದು ವಾಸ ಮಾಡಿದರೆ ನಮ್ಮ ಸಮಸ್ಯೆ ಅರಿವಾಗುತ್ತದೆ ಎಂದು ಸಿಟ್ಟು ಹೊರಹಾಕಿದರು. ಪೊಲೀಸರು ಮಹಿಳೆಯರನ್ನು ಸುಮ್ಮನಾಗಿಸಿದರು.