

ಕೊಪ್ಪಳ: ರಾಜ್ಯ ರಾಜಕೀಯದಲ್ಲಿ ವರ್ಣರಂಜಿತ ರಾಜಕಾರಣಿ ಎಂದು ಬಿಂಬಿಸಿಕೊಂಡಿರುವ ಗಂಗಾವತಿ ಶಾಸಕ ಗಾಲಿ ಜನಾರ್ದನ ರೆಡ್ಡಿ ಎಂಎಲ್ಎ ಸ್ಥಾನಕ್ಕೆ ಕುತ್ತು ಬಂದಿದೆ. ಓಬಳಾಪುರಂ ಮೈನಿಂಗ್ ಅಕ್ರಮದಲ್ಲಿ ಸಿಬಿಐ ವಿಶೇಷ ನ್ಯಾಯಾಲಯ ರೆಡ್ಡಿ ಅಪರಾಧಿಯೆಂದು ಘೋಷಿಸಿದ್ದು, ರಾಜಕೀಯ ವನವಾಸ ಮರು ಆರಂಭಕ್ಕೆ ಈ ಪ್ರಕರಣ ತಿರುವು ನೀಡಲಿದೆಯಾ ಎಂಬ ಪ್ರಶ್ನೆ ಹುಟ್ಟು ಹಾಕಿದೆ.
ಅಕ್ರಮ ಗಣಿಗಾರಿಕೆ ಮೂಲಕ ದೇಶಾದ್ಯಂತ ಸದ್ದು ಮಾಡಿದ್ದ ಜನಾರ್ದನ ರೆಡ್ಡಿ, ಈಗಾಗಲೇ ಹಲವು ವರ್ಷ ಜೈಲಿನಲ್ಲಿ ಕಳೆದಿದ್ದಾರೆ. ಬಳ್ಳಾರಿ ಪ್ರವೇಶಕ್ಕೆ ಕೋರ್ಟ್ ರ್ನಿಬಂಧ ವಿಧಿಸಿದ್ದರಿಂದ 2023ರಲ್ಲಿ ಪಕ್ಕದ ಗಂಗಾವತಿ ಕ್ಷೇತ್ರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷ ಸ್ಥಾಪಿಸಿ ಗೆಲ್ಲುವ ಮೂಲಕ ರಾಜಕೀಯದಲ್ಲಿ ಮರು ಜನ್ಮ ಪಡೆದಿದ್ದಾರೆ. ಇತ್ತೀಚೆಗಷ್ಟೇ ಬಳ್ಳಾರಿ ಪ್ರವೇಶಕ್ಕೆ ಕೋರ್ಟ್ ಅನುಮತಿ ನೀಡಿದ್ದು ಬಳ್ಳಾರಿಯಲ್ಲ ಕಳೆದುಕೊಂಡಿದ್ದ ರಾಜಕೀಯ ದಾಡಸಿತನ ಮರಳಿ ಪಡೆವ ನಿಟ್ಟಿನಲ್ಲಿ ಸಿದ್ಧತೆ ನಡೆಸಿದ್ದರು.
ಕಳೆದ ಲೋಕಸಭಾ ಚುನಾವಣೆಯಲ್ಲಿ ಪೂರ್ವ ಪಕ್ಷ ಬಿಜೆಪಿಗೆ ಮರಳಿದ್ದು ರಾಜಕೀಯ ಸಾಮ್ರಾಜ್ಯ ವಿಸ್ತರಣೆಗೆ ಟೊಂಕ ಕಟ್ಟಿ ಸಿದ್ಧಗೊಂಡಿದ್ದರು. ಸದನದಲ್ಲಿ ಬಳ್ಳಾರಿ ವಿಷಯಗಳನ್ನು ಪ್ರಸ್ತಾಪಿಸುವುದು, ಬಳ್ಳಾರಿಯಲ್ಲಿ ರಾಜಕೀಯ ಸಭೆ, ಸಮಾರಂಭಗಳಲ್ಲಿ ಹೆಚ್ಚು ಕಾಣಿಸಿಕೊಳ್ಳುವ ಮೂಲಕ ರಾಜಕೀಯ ಪುನರ್ಜನ್ಮ ನೀಡಿದ ಗಂಗಾವತಿಯಿಂದ ರಾಜಕೀಯ ಶಕ್ತಿ ಪಡೆದರೂ ಮಾನಸಿಕವಾಗಿ ಬಳ್ಳಾರಿಯತ್ತ ವಾಲಿದ್ದರು.
ರೆಡ್ಡಿ ಅಬ್ಬರ ಇನ್ನೇನು ಮೊದಲಿನಂತಾಗಲಿದೆ ಎಂಬ ಸನ್ನಿವೇಶ ಆರಂಭಿಕ ಹಂತದಲ್ಲೇ ಸಿಬಿಐ ವಿಶೇಷ ನ್ಯಾಯಾಲಯದ ತೀರ್ಪು ಜನಾರ್ದನ ರೆಡ್ಡಿ ಮತ್ತವರ ಬೆಂಬಲಿಗರಿಗೆ ಬರಸಿಡಿಲು ಬಡಿಸಿದೆ. ಸುದೀರ್ ವಿಚಾರಣೆ ನಡೆಸಿದ ಹೈದ್ರಾಬಾದ್ ಕೋರ್ಟ್ 7 ವರ್ಷ ಜೈಲು ಶಿೆ ಪ್ರಕಟಿಸಿದೆ. ಕ್ರಿಮಿನಲ್ ಪ್ರಕರಣದಲ್ಲಿ 3 ವರ್ಷಕ್ಕಿಂತ ಹೆಚ್ಚು ಕಾಲ ಶಿೆಗೆ ಗುರಿಯಾದಲ್ಲಿ ಶಾಸಕ ಸ್ಥಾನಕ್ಕೆ ಕುತ್ತು ಬರಲಿದೆ. ಒಂದೊಮ್ಮೆ ಶಾಸಕ ಸ್ಥಾನ ಕಳೆದುಕೊಂಡಲ್ಲಿ ರೆಡ್ಡಿ ರಾಜಕೀಯ ಇತಿಹಾಸ ಜತೆಗೆ ಭತ್ತದ ನಗರಿ ಗಂಗಾವತಿ ರಾಜಕೀಯ ವಲಯದಲ್ಲೂ ಹೊಸ ಇತಿಹಾಸಕ್ಕೆ ನಾಂದಿ ಆಗಲಿದೆ.
ಅತಂತ್ರದಲ್ಲಿ ಗಂಗಾವತಿ ?
ಇನ್ನು ಕೊಪ್ಪಳ ಜಿಲ್ಲೆ ಮಟ್ಟಿಗೆ ವಾಣಿಜ್ಯ ಚಟುವಟಿಕೆಗೆ ಹೆಚ್ಚಿರುವ ಗಂಗಾವತಿ ಕ್ಷೇತ್ರ ರಾಜ್ಯ ರಾಜಕೀಯದಲ್ಲಿ ಪ್ರಮುಖ ಸ್ಥಾನ ಪಡೆದಿದೆ. ಅಭಿವೃದ್ಧಿ ವಿಷಯದಲ್ಲಿ ಹಿಂದಿನ ಶಾಸಕರು ಜನರ ಭರವಸೆ ಕಳೆದುಕೊಂಡಿದ್ದು, ಮಾಜಿ ಸಚಿವ ಇಕ್ಬಾಲ್ ಅನ್ಸಾರಿ ಅಸಡ್ಡೆ, ಅಕ್ಕ&ಪಕ್ಕದ ಕ್ಷೇತ್ರಗಳ ರಾಜಕೀಯ ನಾಯಕರ ರಾಜಕೀಯ ದುರಾಲೋಚನೆ ಅರಿತ ರೆಡ್ಡಿ ಹುಸಿ ಭರವಸೆಗಳ ದಾಳ ಉರುಳಿಸಿ ಸುಲಭವಾಗಿ ಗಂಗಾವತಿ ಶಾಸಕರಾದರು. ಚುನಾವಣೆಯಲ್ಲಿ ಜನರಿಗೆ ನೀಡಿದ ಭರವಸೆಗಳನ್ನೆಲ್ಲ ಬುಡಮೇಲು ಮಾಡುವ ಮೂಲಕ ಈಗಾಗಲೇ ಕ್ಷೇತ್ರದ ಜನರು ಅತಂತ್ರ ಸ್ಥಿತಿಯಲ್ಲಿಟ್ಟಿದ್ದಾರೆ. ಇದೀಗ ಅವರ ಶಾಸಕ ಸ್ಥಾನಕ್ಕೆ ಕುತ್ತು ಬಂದಿದ್ದು ಕ್ಷೇತ್ರದ ಜನರನ್ನು ಮತ್ತಷ್ಟು ಸಂಕಷ್ಟಕ್ಕೆ ದೂಡಿದಂತಾಗಲಿದೆ. ಮುಂದಿನ ಬೆಳವಣಿಗೆಗಳು ಏನಾಗಲಿದೆ ಎಂಬ ಕುತೂಹಲ ಜನರಲ್ಲಿ ಮನೆ ಮಾಡಿದೆ.
ಕಮಲ ಪಾಳಯಕ್ಕೆ ಮುಖಭಂಗ
ಭ್ರಷ್ಟಾಚಾರ ಹೆಸರಿನಲ್ಲಿ ಹಲವು ವರ್ಷ ಪಕ್ಷದಿಂದ ರೆಡ್ಡಿಯನ್ನು ದೂರವಿಟ್ಟಿದ್ದ ಬಿಜೆಪಿ ಕಳೆದ ಲೋಕಸಭಾ ಚುನಾವಣೆಯಲ್ಲಿ ರ್ ವಾಪಸಿ ಮಾಡಿಸಿಕೊಂಡಿದೆ. ಎಂಪಿ ಚುನಾವಣೆಯಲ್ಲೂ ಕೊಪ್ಪಳ ಸೇರಿ ರೆಡ್ಡಿ ಬಾಹುಳ್ಯವಿದೆ ಎಂದುಕೊಂಡಿದ್ದ ಬಳ್ಳಾರಿ ಹಾಗೂ ಅಕ್ಕಪಕ್ಕದ ಕ್ಷೇತ್ರಗಳಲ್ಲಿ ರೆಡ್ಡಿ ಕಮಾಲ್ ನಡೆಯಲಿಲ್ಲ. ಜನಾರ್ದನ ರೆಡ್ಡಿ ಸೇರ್ಪಡೆಯಿಂದ ಬಂದ ಮತಗಳಿಗಿಂತ ಕಳೆದುಕೊಂಡಿದ್ದೇ ಹೆಚ್ಚು ಎಂಬ ಚರ್ಚೆಗಳು ಕಮಲ ಪಾಳಯದಲ್ಲಿ ಕೇಳಿಬಂದವು. ಇದೀಗ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಅಪರಾಧಿಯೆಂದು ಸಾಬೀತಾಗಿದ್ದು ಬಿಜೆಪಿಗೆ ತೀವ್ರ ಮುಖಭಂಗ ಸೃಷ್ಟಿಸಿದೆ. ಪ್ರತಿಪಕ್ಷಗಳಿಗೆ ರೆಡ್ಡಿ ಪ್ರಕರಣ ಮತ್ತೊಂದು ಪ್ರತ್ಯಾಸ್ತ್ರ ಒದಗಿಸಿದಂತಾಗಲಿದೆ.