

ಕೊಪ್ಪಳ: ಮಾವು, ದಾಳಿಂಬೆ, ಪಪ್ಪಾಯ ಸೇರಿ ತೋಟಗಾರಿಕೆ ಬೆಳೆಗೆ ರೈತರು ಆದ್ಯತೆ ನೀಡಬೇಕು. ಇದರಿಂದ ಹೆಚ್ಚಿನ ಲಾಭ ಪಡೆಯಲು ಸಾಧ್ಯ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.
ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ಹಮ್ಮಿಕೊಂಡಿದ್ದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳಕ್ಕೆ ಚಾಲನೆ ನೀಡಿ ಮಾತನಾಡಿದರು.
ರೈತರಿಗೆ ಅನುಕೂಲವಾಗಲೆಂದು ಇಲಾಖೆಯಿಂದ ಪ್ರತಿ ವರ್ಷ ಮೇಳ ಆಯೋಜಿಸಲಾಗುತ್ತಿದೆ. ಸ್ಥಳಿಯವಾಗಿಯೇ ಮಾರುಕಟ್ಟೆ ದೊರೆಯುತ್ತಿದೆ. ಜನರಿಗೆ ಸುಲಭ ದರದಲ್ಲಿ ಮಾವು ಸಿಗುತ್ತದೆ. ರೈತರಿಗೆ ನೇರ ಮಾರುಕಟ್ಟೆ ಸೌಲಭ್ಯ ಒದಗಿಸಿಕೊಡಲಾಗುತ್ತಿದೆ. ದುಬಾರಿ ಮಾವು ಖ್ಯಾತಿಯ ಮಿಯಾ ಜಾಕಿ ಹಣ್ಣು ಪ್ರದರ್ಶನಕ್ಕಿಟ್ಟಿದ್ದು ಗಮನ ಸೆಳೆಯುತ್ತಿದೆ ಎಂದರು.
ತೋಟಗಾರಿಕೆ ಉಪನಿರ್ದೇಶಕ ಕೃಷ್ಣ ಉಕ್ಕುಂದ ಮಾತನಾಡಿ, ಇಲಾಖೆಯಿಂದ 9ನೇ ಬಾರಿಗೆ ಮೇಳ ಆಯೋಜಿಸಲಾಗಿದೆ. ಮೇ 22ವರೆಗೆ ಇರಲಿದೆ. 100 ರೈತರು ಹೆಸರು ನೋಂದಣಿ ಮಾಡಿಸಿದ್ದಾರೆ. 30 ಸ್ಟಾಲ್ ಹಾಕಲಾಗಿದೆ. ನೈಸರ್ಗಿಕವಾಗಿ ಬೆಳೆದ ಹಣ್ಣು ಮಾರಾಟಕ್ಕೆ ಅವಕಾಶ ಕಲ್ಪಿಸಲಾಗಿದೆ. ಮಿಯಾ ಜಾಕಿ ಮಾವಿನ ಸಸಿ ಮಾರಾಟಕ್ಕಿಡಲಾಗಿದೆ. ಆರು ಸಾವಿರ ಎಕರೆಯಲ್ಲಿ ಮಾವು ಬೆಳೆ ಇದೆ. 10&12 ತಳಿ ಮಾವು ಮಾರುಕಟ್ಟೆಗೆ ಬಂದಿದೆ. ಮಾವು ಉತ್ಪನ್ನಗಳ ಮಾರಾಟಕ್ಕೂ ಅವಕಾಶ ನೀಡಿದ್ದೇವೆಂದು ಮಾಹಿತಿ ನೀಡಿದರು.
ವಿಪ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಸಂಗಣ್ಣ ಕರಡಿ, ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ಜಂಟಿ ಕೃಷಿ ನಿದೇಶಕ ಟಿ.ಎಸ್.ರುದ್ರೇಶಪ್ಪ, ತೋಟಗಾರಿಕೆ ಇಲಾಖೆ ಹಿರಿಯ ಸಹಾಯಕ ನಿರ್ದೇಶಕ ಜೆ.ಶಂಕ್ರಪ್ಪ ಇತರರಿದ್ದರು.