

ಕೊಪ್ಪಳ: ನ್ಯಾಯಾಧೀಶ ನಾಗಮೋಹನ್ ದಾಸ್ ವರದಿ ಜಾರಿ ವಿಷಯದಲ್ಲಿ ಸರ್ಕಾರ ಬದ್ಧವಾಗಿದೆ. ಆದರೆ, ಸಾಧಕ&ಭಾದಕಗಳನ್ನು ಚರ್ಚಿಸುವಂತೆ ಐದಾರು ಸಚಿವರಿಗೆ ಸಿಎಂ ಸೂಚಿಸಿದ್ದಾರೆಂದು ಸಚಿವ ತಂಗಡಗಿ ತಿಳಿಸಿದರು.
ಬಿಜೆಪಿಯ ಗೋವಿಂದ ಕಾರಜೋಳ, ನಾರಾಯಣಸ್ವಾಮಿ ಇದರದಲ್ಲಿ ರಾಜಕೀಯ ಮಾಡುತ್ತಿದ್ದಾರೆ. ಅವರು ಅಧಿಕಾರದಲ್ಲಿದ್ದಾಗ ಏನೂ ಕ್ರಮ ಕೈಗೊಳ್ಳಲಿಲ್ಲ. ಒಂದೂ ಆಯೋಗ ರಚಿಸಲಿಲ್ಲ. ಸದಾಶಿವ ಆಯೋಗ ವರದಿಯನ್ನು ಜಾರಿ ಮಾಡಲಿಲ್ಲ. ಕೇಂದ್ರದಲ್ಲಿ ಅವರದೇ ಸರ್ಕಾರ ಇದ್ದಾಗಲೂ ಕೈ ಕಟ್ಟಿ ಕುಳಿತಿದ್ದರು. ಬಿಜೆಪಿಗರಿಗೆ ಒಳ ಮೀಸಲು, ಸಂವಿಧಾನಕ್ಕೆ ಸಂಬಂಧವಿಲ್ಲ. ಕಾಂಗ್ರೆಸ್ ಮಾತ್ರ ಮೀಸಲು ಕಲ್ಪಿಸುವುದು ಎಂದು ಸಮರ್ಥಿಸಿಕೊಂಡರು.
ಕೆ.ಎನ್.ರಾಜಣ್ಣ ವಜಾ ಆಗಬಾರದಿತ್ತು. ವೈಯಕ್ತಿಕವಾಗಿ ನನಗೆ ಬೇಜಾರಿದೆ. ಈ ಬಗ್ಗೆ ಸಿಎಂ, ಪಕ್ಷದ ಹೈಕಮಾಂಡ್ ಸೂಕ್ತ ತೀರ್ಮಾನ ಕೈಗೊಳ್ಳಲಿದೆ. ಧರ್ಮಸ್ಥಳ ವಿಷಯದಲ್ಲೂ ತನಿಖೆ ನಡೆದು ವರದಿ ಬಂದ ಬಳಿಕ ಮಾತನಾಡಿದರೆ ಸೂಕ್ತ. ಗವಿ ನಾಯಕ ಕೊಲೆ ಪ್ರಕರಣದಲ್ಲಿ ಬಿಜೆಪಿ ರಾಜಕೀಯ ಮಾಡುತ್ತಿದೆ. ಕೊಲೆ ಆಗಬಾರದಿತ್ತು. ನಾವೂ ಹಿಂದುಗಳೇ. ಬೇರೆಯವರಲ್ಲ. ಸತ್ತವರ ಹೆಸರಿನಲ್ಲಿ ರಾಜಕಾರಣ ಬೇಡ. ಬಿಜೆಪಿಯವರು ಪಕ್ಷದಿಂದ ಅವರ ಕುಟುಂಬಕ್ಕೆ ನೆರವು ನೀಡಲಿ ಎಂದು ಸಲಹೆ ನೀಡಿದರು.