

ಕೊಪ್ಪಳ: ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯಿಂದ ಕೈಗೊಂಡಿರುವ ಕಾಮಗಾರಿಗಳನ್ನು ಕಾಲಮಿತಿಯಲ್ಲಿ ಮುಗಿಸಿ. ಇಲ್ಲದಿದ್ದರೆ ಸಂಬಂಧಪಟ್ಟ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಎಚ್ಚರಿಕೆ ನೀಡಿದರು.
ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಜಿಲ್ಲೆಯ ಪ್ರಗತಿ ಪರಿಶೀಲನಾ ಸಭೆ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ಕೆ.ಕೆ.ಆರ್.ಡಿ.ಬಿ ಅನುದಾನಡಿ ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾದ 2018&-19, 2019-&20 ಮತ್ತು 2020-&21ನೇ ಸಾಲಿನ ಬಾಕಿ ಕಾಮಗಾರಿಗಳನ್ನು ಪೂರ್ಣಗೊಳಿಸಬೇಕು. ಜತೆಗೆ 2023-&24ನೇ ಸಾಲಿನ ಮುಕ್ತಾಯ ಹಂತದಲ್ಲಿರುವ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪೂರ್ಣಗೊಳಿಸಲು ಅನುಷ್ಠಾನಾಧಿಕಾರಿಗಳು ತ್ವರಿತ ಕ್ರಮ ಕೈಗೊಳ್ಳಬೇಕು ಎಂದರು.
ಇನ್ನೂ ಪ್ರಾರಂಭಿಸದೆ ಇರುವ ಕಾಮಗಾರಿಗಳ ಕುರಿತು ಯಾವುದೇ ಸಮಸ್ಯೆಗಳಿದ್ದರೆ, ಕೂಡಲೇ ಅದನ್ನು ಸರಿಪಡಿಸಿ ಆ ಎಲ್ಲಾ ಕಾಮಗಾರಿಗಳನ್ನು ಡಿಸೆಂಬರ್ ಒಳಗೆ ಪ್ರಾರಂಭಿಸಲು ಕ್ರಮವಹಿಸಿ. ಈ ಹಿನ್ನೆಲೆಯಲ್ಲಿ ಯಾವುದೇ ಕಾಮಗಾರಿಗಳು ಅಪೂರ್ಣ ಅಥವಾ ಪ್ರಾರಂಭವಾಗದೇ ಬಾಕಿ ಉಳಿದರೆ ಸಂಬಂಧಪಟ್ಟ ಅಧಿಕಾರಿಗಳನ್ನೆ ಜವಾಬ್ದಾರರನ್ನಾಗಿ ಮಾಡಲಾಗುವುದು ಎಂದು ಹೇಳಿದರು.
2024-25ನೇ ಸಾಲಿನ ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿಯ ಮೈಕ್ರೋ ಮತ್ತು ಮ್ಯಾಕ್ರೋ ಯೋಜನೆಯ ಅನುದಾನದಡಿ ಜಿಲ್ಲೆಗೆ ಮಂಜೂರಾದ ಎಲ್ಲಾ ಕಾಮಗಾರಿಗಳನ್ನು ಟೆಂಡರ್ ಕರೆದು ಅನುಮೋದನೆ ನೀಡಿ, ಅನುಷ್ಠಾನ ಕಾಮಗಾರಿಗಳನ್ನು ಡಿಸೆಂಬರ್ ಅಂತ್ಯದೊಳಗೆ ಪ್ರಾರಂಭಕ್ಕೆ ಕ್ರಮ ವಹಿಸಬೇಕು. ಯಾವುದೇ ಕಾರಣಕ್ಕೂ ಅನಗತ್ಯ ವಿಳಂಬ ಮಾಡಬಾರದು. ಕೆ.ಕೆ.ಆರ್.ಡಿ.ಬಿ ಮಂಡಳಿಯ ಅನುದಾನವನ್ನು ಸಮರ್ಪಕವಾಗಿ ಬಳಕೆ ಮಾಡಿಕೊಂಡು ಜಿಲ್ಲೆಯ ಅಭಿವೃದ್ಧಿಗೆ ಒತ್ತು ನೀಡಬೇಕು ಎಂದರು.
ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ನಿಮಾರ್ಣವಾಗುತ್ತಿರುವ ರಂಗಮಂದಿರ ಮತ್ತು ಜಿಲ್ಲೆಯ ವಿವಿಧೆಡೆ ನಿಮಾರ್ಣವಾಗುತ್ತಿರುವ ಶಾಲಾ ಕೊಠಡಿಗಳು, ಆರೋಗ್ಯ ಕೇಂದ್ರಗಳು ಹಾಗೂ ಇತರೆ ಕಟ್ಟಡಗಳ ಲೋಕಾರ್ಪಣೆಗಳಿದ್ದರೆ ಸಂಬಂಧಪಟ್ಟ ಅಧಿಕಾರಿಗಳು ನಮ್ಮ ಗಮನಕ್ಕೆ ತನ್ನಿ. ಕಾರಟಗಿ, ಕನಕಗಿರಿ ಹಾಗೂ ಕುಕನೂರು ತಾಲ್ಲೂಕುಗಳಲ್ಲಿ ಮಿನಿ ವಿಧಾನಸೌಧ ನಿಮಾರ್ಣಕ್ಕಾಗಿ ಮೂರು ತಾಲೂಕುಗಳಲ್ಲಿ ಜಮೀನು ಗುರುತಿಸಲು ಆಯಾ ತಹಸೀಲ್ದಾರರು ಕ್ರಮ ಕೈಗೊಳ್ಳಬೇಕೆಂದು ಸೂಚಿಸಿದರು.
ಸಭೆಯಲ್ಲಿ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿ.ಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಡಾ.ರಾಮ್ ಎಲ್. ಅರಸಿದ್ದಿ, ಎಡಿಸಿ ಸಿದ್ರಾಮೇಶ್ವರ, ಎಸಿ ಕ್ಯಾ. ಮಹೇಶ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಡಿಎಚ್ಒ ಡಾ.ಲಿಂಗರಾಜು ಟಿ ಹಾಗೂ ಇತರರಿದ್ದರು.