

ಕೊಪ್ಪಳ: ಕನ್ನಡ ಭಾಷೆ ಆದ್ಯತೆ ಮೇರೆಗೆ ಬಳಸೋಣ. ನಮ್ಮ ಭಾಷೆಯಲ್ಲಿ ತಂತ್ರಜ್ಞಾನ ಅಭಿವೃದ್ಧಿಗೆ ನಮ್ಮಸರ್ಕಾರ ಬದ್ಧವಿದೆ ಎಂದು ಕನ್ನಡ ಮತ್ತು ಸಂಸ್ಕೃತಿ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ತಿಳಿಸಿದರು.
ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಸುವರ್ಣ ಕರ್ನಾಟಕ ರಾಜ್ಯೋತ್ಸವ ಅಂಗವಾಗಿ ರಾಷ್ಟ್ರ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.
ಕನ್ನಡ ಭಾಷೆ ಬಳಸಿ, ಬೆಳಸಿ, ಉಳಿಸುವ ಜವಾಬ್ದಾರಿ ಪ್ರತಿಯೊಬ್ಬ ಕನ್ನಡಿಗನ ಮೇಲಿದೆ. ರಾಜ್ಯ ಸರ್ಕಾರ ಕನ್ನಡ ನಾಡು ನುಡಿ ಸೇವೆಗೆ ಸದಾ ಬದ್ಧ.ಕರ್ನಾಟಕ ಸುವರ್ಣ ಸಂಭ್ರಮ ಅಂಗವಾಗಿ ರಾಜ್ಯದ ಎಲ್ಲ ಜಿಲ್ಲಾ ಕೇಂದ್ರಗಳಲ್ಲಿ ಹಲ್ಮಿಡಿ ಶಾಸನದ ಪ್ರತಿಕೃತಿ ಪ್ರತಿಷ್ಠಾಪಿಸಲು ಸೂಚಿಸಲಾಗಿದೆ ಎಂದರು.
2024-25ನೇ ಸಾಲಿನಲ್ಲಿ ಕಲ್ಯಾಣ ಕರ್ನಾಟಕ ಪ್ರದೇಶ ಅಭಿವೃದ್ಧಿ ಯೋಜನೆಯಡಿ ಕೊಪ್ಪಳ ಜಿಲ್ಲೆಗೆ ಮೈಕ್ರೊ ವಲಯದಲ್ಲಿ ₹238.81 ಕೋಟಿ, ಮ್ಯಾಕ್ರೊ ವಲಯದಲ್ಲಿ ₹128.59 ಕೋಟಿ ಅನುದಾನ ನಿಗದಿ ಪಡಿಸಲಾಗಿದೆ. ಕ್ರಿಯಾಯೋಜನೆ ಅನುಮೋದನೆ ಹಂತದಲ್ಲಿದೆ ಎಂದು ತಿಳಿಸಿದರು.
ಇದಕ್ಕೂ ಮೊದಲು ಪೊಲೀಸ್, ಎನ್ ಸಿಸಿ, ಸ್ಕೌಟ್ ಅಂಡ್ ಗೈಡ್ಸ್ ಹಾಗೂ ವಿವಿಧ ಶಾಲೆಗಳ ವಿದ್ಯಾರ್ಥಿಗಳು ನಡೆಸಿದ ಪಥ ಸಂಚಲನ ಗಮನ ಸೆಳೆಯಿತು.
ಸಂಸದ ರಾಜಶೇಖರ ಹಿಟ್ನಾಳ, ವಿಪ ಸದಸ್ಯೆ ಹೇಮಲತಾ ನಾಯಕ, ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್ ಜಿಲ್ಲಾಧಿಕಾರಿ ನಲಿನ್ ಅತುಲ್, ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಸ್ಪಿ ಡಾ. ರಾಮ್ ಎಲ್. ಅರಸಿದ್ದಿ, ಡಿಎಫ್ಒ ಕಾವ್ಯಾ ಚತುರ್ವೇದಿ, ಎಡಿಸಿ ಸಿದ್ರಾಮೇಶ್ವರ ಇತರರಿದ್ದರು.