ನಾಯ್ಡು ಫ್ಲಾಗ್ ಹಾರಿಸಿದರೆ ಕೇಂದ್ರ ಸರ್ಕಾರ ಬೀಳಲಿದೆ, ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿಕೆ

Published on

ಕೊಪ್ಪಳ: ರಾಜ್ಯದಲ್ಲಿ ಸಿಎಂ ಬದಲಾವಣೆ ಇಲ್ಲ. ಕೇಂದ್ರದಲ್ಲಿ ಸಮ್ಮಿಶ್ರ ಸರ್ಕಾರ ಅಧಿಕಾರದಲ್ಲಿದೆ. ಚಂದ್ರಬಾಬು ನಾಯ್ಡು ಫ್ಲಾಗ್ ಹಾರಿಸಿದರೆ ಸರ್ಕಾರ ಉರುಳಲಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್ ಹೇಳಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು.

ಕೇಂದ್ರದಲ್ಲಿರುವುದು ಸಮ್ಮಿಶ್ರ ಸರ್ಕಾರ. ಯಾಕೆ ಪ್ರಧಾನಿ ಮೋದಿ ಬದಲಾವಣೆ ಆಗಬಾರದು ? ನಾವು 137 ಶಾಸಕರಿದ್ದೇವೆ. ನಮ್ಮ ಸರ್ಕಾರ ಭದ್ರ. ಸಿಎಂ ಬದಲಾವಣೆ ಆಗುವುದಿಲ್ಲ. ಸರ್ಕಾರ ಅಧಿಕಾರಕ್ಕೆ ಬಂದಾಗಿನಿಂದ ಈ ಬಗ್ಗೆ ಮಾತನಾಡುತ್ತಿದ್ದಾರೆ. ಆದರೆ, ಏನೂ ಆಗುವುದಿಲ್ಲ. ನಿಜವಾಗಿ ಬಿಜೆಪಿ ಐಸಿಯುನಲ್ಲಿದೆ. ಬಿಜೆಪಿಗೆ ಬಹುಮತ ಇಲ್ಲ. ಆಂಧ್ರದಲ್ಲಿ ಚಂದ್ರಬಾಬು ನಾಯ್ಡು ಫ್ಲಾಗ್ ಹಾರಿಸಿದರೆ ಸರ್ಕಾರ ಉರುಳುತ್ತದೆ. ಸಿಎಂ ಬದಲಾವಣೆ ವಿಷಯ ಬಂದಾಗಲೆಲ್ಲ ನಾವು ಸಮರ್ಪಕ ಉತ್ತರ ಕೊಟ್ಟಿದ್ದೇವೆ‌. ಗ್ರಾಪಂನಿಂದ ಲೋಕಸಭೆ ಚುನಾವಣೆವರೆಗೂ ಬಿಜೆಪಿಗರು ಬರಿ ಮೋದಿ ಎನ್ನುತ್ತಾರೆ. ಹೀಗಾಗಿ ಮೋದಿ ಅವರ ಬಗ್ಗೆ ನಾವೇಕೆ ಮಾತನಾಡಬಾರದು ? ಸಮ್ಮಿಶ್ರ ಸರ್ಕಾರವಿದ್ದು, ಮೋದಿಗೂ 75 ವರ್ಷ ವಯಸ್ಸಾಗಿದೆ. ಬದಲಾವಣೆ ಆದರೆ ತಪ್ಪೇನು ? ಈ ಬಗ್ಗೆಯೂ ಮಾತನಾಡಬೇಕಾಗುತ್ತದೆ ಎಂದರು.

ರಣದೀಪ್ ಸಿಂಗ್ ಸುರ್ಜೇವಾಲಾ ಅವರು ನಮ್ಮ ಎಐಸಿಸಿ ಕಾರ್ಯದರ್ಶಿಗಳು. ಕೆಲ ಶಾಸಕರು ಆಡಳಿತ ಬಗ್ಗೆ ಆರೋಪ ಮಾಡಿದ್ದಾರೆ. ಅದರ ಭಾಗವಾಗಿ ಅವರು ರಾಜ್ಯಕ್ಕೆ ಬಂದಿದ್ದಾರೆ. ಪಕ್ಷದಲ್ಲಿ ಶಿಸ್ತು ಕಾಪಾಡಬೇಕಿದೆ. ಅವರೇನೂ ಸೂಪರ್ ಸಿಎಂ ಅಲ್ಲ. ಪಿಎಂ ಮೋದಿ ಅನೇಕ ಬಾರಿ ವಿದೇಶಕ್ಕೆ ಹೋಗುತ್ತಾರೆ. ಹಾಗಂತ ಅವರೇ ಆ ದೇಶದ ಸೂಪರ್ ಪ್ರಧಾನಿ ಆಗುತ್ತಾರಾ ಎಂದು ವಿಪಕ್ಷದವರಿಗೆ ತಿರುಗೇಟು ನೀಡಿದರು.

ಗ್ಯಾರಂಟಿ ಯೋಜನೆಗಳು ಜನರಿಗೆ ವರವಾಗಿವೆ. ಗೃಹಲಕ್ಷ್ಮೀ ಯೋಜನೆಯಡಿ ಹಣ ಬರುವುದು ಕೆಲ ತಿಂಗಳು ತಡವಾಗಿರಬಹುದು. ಆದರೆ, ಎಲ್ಲರಿಗೂ ಬರುತ್ತಿದೆ. ಚುನಾವಣೆ ವೇಳೆ ಮಾತ್ರ ಹಾಕುವುದಿಲ್ಲ. ಬಿಜೆಪಿಯವರಿಗೆ ಅಂಥ ಕೆಲಸ ಮಾಡಿ ಅಭ್ಯಾಸ ಇದೆ. ಅತ್ಯಾಚಾರ ಕೇಸ್ ಆರೋಪಿ ಬಾಬಾ ನೀಮ್ ಅವರನ್ನು ಚುನಾವಣೆ ಸಮಯದಲ್ಲೆಲ್ಲ 21 ಬಾರಿ ಪೆರೊಲ್ ಮೇಲೆ ಹೊರತಂದಿದ್ದರು‌. ಹೀಗಾಗಿ ಚುನಾವಣೆಗೆ ಯಾರನ್ನು, ಹೇಗೆ ಬಳಸಿಕೊಳ್ಳಬೇಕೆಂದು ಅವರಿಗೆ ಅಭ್ಯಾಸವಿದೆ ಎಂದು ಆರೋಪಿಸಿದರು.

ಅಸಂಘಟಿತ ಕಾರ್ಮಿಕರಿಗೆ ಸೆಸ್ ಹಣ

ರಾಜ್ಯದಲ್ಲಿ ಶೇ.83ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಅವರಿಗಾಗಿ ಪ್ರತ್ಯೇಕ ಮಂಡಳಿ ರಚಿಸಲಾಗಿದೆ. ಹೊಸದಾಗಿ ಮೂರು ಬಿಲ್ ತಂದಿದ್ದೇವೆ. ಇಂಧನ ಮೇಲಿನ ಸೆಸ್ ಹೆಚ್ಚಳವಾಗಿದ್ದು ಅದರಲ್ಲಿ ಶೇ.1ರಷ್ಟು ನೀಡುವಂತೆ ಸಿಎಂಗೆ ಮನವಿ ಮಾಡಿರುವೆ. ಇದರಿಂದ ವಾರ್ಷಿಕ 1200 ಕೋಟಿ ರೂ. ಸಿಗಲಿದ್ದು ಕಾರ್ಮಿಕರ ಕಲ್ಯಾಣ ಯೋಜನೆಗೆ ನೆರವಾಗಲಿದೆ. ನಾವು ಪಂಚ ಗ್ಯಾರಂಟಿ ಕೊಟ್ಟಿದ್ದೇವೆ. ವಾರ್ಷಿಕ 58 ಸಾವಿರ ಕೋಟಿ ರೂ. ಖರ್ಚಾಗುತ್ತಿದೆ. ಐದು ವರ್ಷಕ್ಕೆ 3 ಲಕ್ಷ ಕೋಟಿ ರೂ. ಆಗಲಿದೆ. ಕೇಂದ್ರ ಸರ್ಕಾರ ಎಗ್ ರೈಸ್ ಬಂಡಿಯಿಂದ ಹಿಡಿದು ದೊಡ್ಡ ಉದ್ಯಮ, ಹುಟ್ಟಿನಿಂದ ಹಿಡಿದು ಸತ್ತಾಗ ಸುಡುಗಾಡಿನಲ್ಲಿ ತೆಂಗಿನಕಾಯಿ ಒಡೆಯುವರೆಗೂ ಜಿಎಸ್ಟಿ ವಿಧಿಸಿದೆ. ಲಕ್ಷಾಂತರ ಕೋಟಿ ರೂ. ಉದ್ಯಮಿಗಳ ಸಾಲ ಮನ್ನಾ ಮಾಡಿದೆ ಎಂದು ಸಚಿವ ಲಾಡ್ ಕಟುವಾಗಿ ಟೀಕಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net