

ಕೊಪ್ಪಳ: ಭಾಗ್ಯನಗರ ಶಾದಿ ಮಹಲ್ ಹಾಗೂ ಆಶ್ರಯ ಯೋಜನೆ ಮನೆಗಳಿಗೆ ಅನುದಾನ ನೀಡುವಂತೆ ಒತ್ತಾಯಿಸಿ ಶಾಸಕ ರಾವೇಂದ್ರ ಹಿಟ್ನಾಳ ನೇತೃತ್ವದಲ್ಲಿ ವಿವಿಧ ಮುಖಂಡರು ಗುರುವಾರ ಬೆಂಗಳೂರಿನಲ್ಲಿ ಸಚಿವ ಜಮೀರ್ ಖಾನ್ಗೆ ಮನವಿ ಸಲ್ಲಿಸಿದರು.
ಭಾಗ್ಯನಗರ ಪಟ್ಟಣದಲ್ಲಿ ಶಾದಿ ಮಹಲ್ ಕಾಮಗಾರಿಗೆ ಅನುದಾನ ಕೊರತೆಯಾಗಿದೆ. ಕೊಳಗೇರಿ ಅಭಿವೃದ್ಧಿಗೆ ಹೆಚ್ಚಿನ ಅನುದಾನ ಅವಶ್ಯವಿದೆ. ಜತೆಗೆ ಆಶ್ರಯ ಯೋಜನೆ ಮನೆಗಳಿಗೂ ಅಗತ್ಯ ಅನುದಾನ ನೀಡಿದಲ್ಲಿ ಅಭಿವೃದ್ಧಿಗೆ ಅನುಕೂಲವಾಗಲಿದೆ. ಕೊಪ್ಪಳ ತಾಲೂಕಿನ ಮುನಿರಾಬಾದ್, ಹಿಟ್ನಾಳ, ಬಹದ್ದೂರ್ ಬಂಡಿ, ಅಳವಂಡಿ ಮತ್ತು ಕೊಪ್ಪಳ ನಗರಕ್ಕೆ ಹೊಸದಾಗಿ ಶಾದಿ ಮಹಲ್ ಮಂಜೂರು ಮಾಡುವಂತೆ ಒತ್ತಾಯಿಸಿದರು.
ಸಚಿವ ಖಾನ್ ಅನುದಾನ ಬಿಡುಗೆ ಭರವಸೆ ನೀಡಿದರು. ಕೊಪ್ಪಳ ನಗರಸಭೆಗೆ 10 ಕೋಟಿ ರೂ., ಭಾಗ್ಯನಗರ ಪಪಂಗೆ 5 ಕೋಟಿ ರೂ. ಅನುದಾನ ನೀಡುವುದಾಗಿ ಹೇಳಿದರು. ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಭಾಗ್ಯನಗರ ಪಪಂ ಉಪಾಧ್ಯಕ್ಷ ಹೊನ್ನೂರಸಾಬ್ ಬೈರಾಪುರ, ಸ್ಥಾಯಿ ಸಮಿತಿ ಅಧ್ಯಕ್ಷ ಶಿವರಾಂ ಮೇಗಳಮನಿ ಇತರರಿದ್ದರು.