ಸಿಎಂ ಅಂಗಳ ತಲುಪಿದ ಅಕ್ರಮ ವಿಷಯ, ಡಿಸಿಗೆ ವರದಿ ಕೇಳಿದ ಸಿಎಸ್​

Published on

ಕೊಪ್ಪಳ: ಜಿಲ್ಲೆಯಲ್ಲಿನ ಅಕ್ರಮ ಗಣಿಗಾರಿಕೆ, ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಬರೆದ ಪತ್ರ ವಿಷಯವ ಸಿಎಂ ಅಂಗಳ ತಲುಪಿದೆ. ಜನಪ್ರತಿನಿಧಿಗಳು&ಅಧಿಕಾರಿಗಳ ನಡುವಿನ ಮುಸುಕಿನ ಗುದ್ದಾಟ ಬಗ್ಗೆ ಸರ್ಕಾರದ ಮುಖ್ಯ ಕಾರ್ಯದರ್ಶಿ ಜಿಲ್ಲಾಧಿಕಾರಿಗೆ ವರದಿ ಕೇಳಿದ್ದು ಪ್ರಕರಣ ಮತ್ತೊಂದು ಟ್ಟ ಮುಟ್ಟಿದೆ.

ಅಕ್ರಮ ಗಣಿಗಾರಿಕೆ, ಅಧಿಕಾರಿಗಳ ಭಾಗಿತ್ವದ ಬಗ್ಗೆ ರಾಯರಡ್ಡಿ ಅ.18ರಂದು ಪತ್ರ ಬರೆದಿದ್ದಾರೆ. ಇದೇ ಅವಧಿಯಲ್ಲಿ ಜಿಲ್ಲೆಯ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿಗಳ ಆಡಳಿತ ವೈಖರಿ, ಸಾರ್ವಜನಿಕರಿಂದ ಬಂದ ದೂರುಗಳನ್ನಾಧಿರಿಸಿ ಮಾಡಿದ ತನಿಖಾ ವರದಿ ಇಲಾಖೆ ನಿರ್ದೇಶಕರಿಗೆ ಸಲ್ಲಿಕೆಯಾಗಿದೆ. 10 ಅಧಿಕಾರಿಗಳು ಸುಮಾರು ವರ್ಷಗಳಿಂದ ಒಂದೇ ಕಚೇರಿಯಲ್ಲಿದ್ದು ಭ್ರಷ್ಟಾಚಾರಕ್ಕೆ ಸಹಕರಿಸುತ್ತಿದ್ದಾರೆಂದು ಗಂಭೀರ ಆರೋಪ ಮಾಡಲಾಗಿದೆ.

ಕುಕನೂರು ತಾಲೂಕಿನ ತಳಕಲ್​ ಗ್ರಾಮದ ಬೆಣ್ಣಿ ಕೆರೆ ಹೂಳು ತೆರೆವು ಮಾಡಲಾಗುತ್ತಿದೆ. ಸರ್ಕಾರಿ ಜಾಗದಲ್ಲಿನ ತಗ್ಗು ಭರ್ತಿ ಮಾಡುವಂತೆ ಗ್ರಾಪಂನಿಂದ ಪತ್ರ ಬರೆದಿದ್ದು, ಅದಕ್ಕೆ 5 ಲಕ್ಷ ರೂ. ರಾಜಧನ ಪಾವತಿಗೆ ಅಧಿಕಾರಿಗಳು ಸೂಚಿಸಿದ್ದು ತಿಕ್ಕಾಟ ಬಿರುಸುಗೊಳ್ಳಲು ವೇದಿಕೆಯಾಗಿದೆ. ರಾಯರಡ್ಡಿ ಪತ್ರಕ್ಕೆ ಎದುರಾಗಿ ಅಧಿಕಾರಿಗಳು ಬರೆದಿದ್ದಾರೆ ಎನ್ನಲಾದ 20 ಪ್ರಶ್ನೆಗಳುಳ್ಳ ಅನಾಮಧೇಯ ಪತ್ರ ಸರ್ಕಾರದ ಆಡಳಿತ ವೈಖರಿ ಪ್ರಶ್ನಿಸುವಂತಿತ್ತು. ಜತೆಗೆ ಸರ್ಕಾರವನ್ನು ಮುಜುಗರಕ್ಕಿಡು ಮಾಡಿದೆ.

ಈ ಬೆನ್ನಲ್ಲೆ ಎಚ್ಚೆತ್ತ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಹಿರಿಯ ಭೂ ವಿಜ್ಞಾನಿ ಪುಷ್ಪಲತಾ ಕವಲೂರು ಪತ್ರಕ್ಕೂ ತಮಗೂ ಸಂಬಂಧವಿಲ್ಲವೆಂದು ಸ್ಪಷ್ಟನೆ ನೀಡಿದ್ದಾರೆ. ಪ್ರಕರಣ ಕುರಿತು ಯಾವುದೇ ಪ್ರತಿಕ್ರಿಯೆ ನೀಡಲು ನಿರಾಕರಿಸಿದ್ದಾರೆ. ಇತ್ತ ಸರ್ಕಾರದ ಮುಖ್ಯ ಕಾರ್ಯದರ್ಶಿ ಪ್ರಕರಣ ಸಂಬಂಧ ಜಿಲ್ಲಾಧಿಕಾರಿಗೆ ವರದಿ ಸಲ್ಲಿಸುವಂತೆ ಕೇಳಿದ್ದಾರೆ. ಈ ಮೂಲಕ ಅಕ್ರಮ ಪ್ರಕರಣ ಸಿಎಂ ಗಮನ ಸೆಳೆದಿದ್ದು ಯಾವ ಕ್ರಮ ಆಗಲಿದೆ ಎಂಬ ಕುತೂಹಲ ಕೆರಳಿಸಿದೆ.

ಯಾರ ತಲೆದಂಡ ?

ಅಕ್ರಮ ಗಣಿಗಾರಿಕೆ ಪ್ರಕರಣ ರಾಜ್ಯದ ಗಮನ ಸೆಳೆದಿದೆ. ಸ್ವತ@ ಸಿಎಂ ಆರ್ಥಿಕ ಸಲಹೆಗಾರರಾಗಿರುವ ಬಸವರಾಜ ರಾಯರಡ್ಡಿ ಪತ್ರ ಬರೆದಿರುವುದು ಸರ್ಕಾರಕ್ಕೆ ಮುಜುಗರ ತಂದಿದೆ. ವಿಪಕ್ಷಗಳ ಟೀಕೆಗೆ ಸರ್ಕಾರವೇ ಅಸ್ತ್ರ ನೀಡಿದಂತಾಗಿದೆ. ಒಂದೇ ಇಲಾಖೆ ಅಷ್ಟೂ ಅಧಿಕಾರಿಗಳನ್ನು ಏಕಕಾಲಕ್ಕೆ ವರ್ಗಾವಣೆ ಮಾಡಿದರೆ ಅಕ್ರಮ ನಡೆಯುತ್ತಿದೆ ಎಂಬುದನ್ನು ಸರ್ಕಾರವೇ ಒಪ್ಪಿಕೊಂಡಂತಾಗಲಿದೆ. ಒಂದೊಮ್ಮೆ ಕ್ರಮ ಆಗದಿದ್ದರೆ ರಾಯರಡ್ಡಿ ಆರೋಪ ಹಾಗೂ ಪತ್ರಕ್ಕೆ ಯಾವುದೇ ಬೆಲೆ ಇಲ್ಲದಂತಾಗಲಿದೆ. ಒಟ್ಟಾರೆ ಪ್ರಕರಣ ರಾಜ್ಯ ಸರ್ಕಾರವನ್ನು ಅಡಕತ್ತರಿಗೆ ಸಿಲುಕಿಸಿದ್ದು ಯಾರ ತಲೆದಂಡವಾಗಲಿದೆ ಎಂಬ ಪ್ರಶ್ನೆ ಹುಟ್ಟುಹಾಕಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net