ಹೋಳಿ ಆಚರಣೆ ಶಾಂತವಾಗಿರಲಿ, ಡಿಸಿ ನಲಿನ್ ಅತುಲ್ ಸೂಚನೆ

district koppal meeting dc naleen athul holi festival
Published on

ಕೊಪ್ಪಳ: ಪ್ರತಿ ಬಾರಿಯಂತೆ ಈ ವರ್ಷವೂ ಹೋಳಿ ಹಬ್ಬ ಶಾಂತಿಯಿಂದ ಆಚರಿಸಲು ಸಾರ್ವಜನಿಕರು ಸಹಕರಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಮನವಿ ಮಾಡಿದರು.

ನಗರದ ಜಿಲ್ಲಾಡಳಿತ ಭನವದ ಆಡಿಟೋರಿಯಂ ಹಾಲ್ನಲ್ಲಿ ಬುಧವಾರ ಹಮ್ಮಿಕೊಂಡಿದ್ದ ಶಾಂತಿ ಸಭೆಯಲ್ಲಿ ಮಾತನಾಡಿದರು.

ಹಬ್ಬಗಳು ನಮ್ಮ ಸಂಭ್ರಮ ಹೆಚ್ಚಿಸಬೇಕು. ಅದರಿಂದ ಇನ್ನೊಬ್ಬರಿಗೆ ತೊಂದರೆ ಆಗಬಾರದು. ಹೋಳಿ ಸಮಯದಲ್ಲಿ ರಂಜಾನ್ ಹಬ್ಬ ಸಹ ಬರಲಿದೆ. ಪಿಯು ಮಕ್ಕಳ ಪರೀೆ ನಡೆಯುತ್ತಿವೆ. ಡಿಜೆ ಹಚ್ಚಿ ಶಬ್ದ ಉಂಟು ಮಾಡಿ ಇತರರಿಗೆ ತೊಂದರೆ ಮಾಡಬೇಡಿ. ಸಾಮಾಜಿಕ ಮಾಧ್ಯಮಗಳಲ್ಲಿ ಕೋಮು ಸೌಹಾರ್ದತೆಗೆ ಧಕ್ಕೆ ತರುವ ಪೋಸ್ಟ್ ಹಾಕಬೇಡಿ. ನಮ್ಮ ಹಿರಿಯರು ಹಾಕಿಕೊಂಡ ಉತ್ತಮ ಮಾರ್ಗದಲ್ಲಿ ಸಾಗೋಣ. ಮಾ.13ರಿಂದ 15ವರೆಗೆ ಹೋಳಿ ಆಚರಣೆ ಇದೆ. ಎಲ್ಲ ಸಮುದಾಯದ ಹಿರಿಯರು ಯುವಕರಿಗೆ ತಿಳಿಹೇಳಿ. ಎಲ್ಲರಿಗೂ ಹಬ್ಬದ ಶುಭಾಶಯಗಳು ಎಂದರು.

ಎಸ್ಪಿ ಡಾ.ರಾಮ್ ಎಲ್.ಅರಸಿದ್ದಿ ಮಾತನಾಡಿ, ಶುಕ್ರವಾರವೇ ಹೋಳಿ ಆಚರಣೆ ಇದೆ. ಅಂದು ಮಸೀದಿಗಳಲ್ಲಿ ಪ್ರಾರ್ಥನೆ ಇರಲಿದೆ. ಎಲ್ಲರೂ ಸೌಹಾರ್ದತೆಯಿಂದ ಹಬ್ಬ ಆಚರಿಸಿ. ಇತರರ ಭಾವನೆಗಳಿಗೆ ಧಕ್ಕೆ ತರದಂತೆ ನೋಡಿಕೊಳ್ಳಿ. ಡಿ.ಜೆ.ಗಳಿಗೆ ಅನುಮತಿ ಇಲ್ಲ. ಅಗತ್ಯ ಇದ್ದಲ್ಲಿ ಅನುಮತಿ ಪಡೆಯಿರಿ. ಅನುಮತಿ ಪಡೆಯದೇ ಬಳಸಿದರೆ ವಶಪಡಿಸಿಕೊಳ್ಳಲಾಗುವುದು. ರಸ್ತೆ ಮಧ್ಯದಲ್ಲಿ ಕಾಮದಹನ ಬೇಡ. ಒಂದು ಪಕ್ಕದಲ್ಲಿ ಮಾಡಿ. ಎಲ್ಲೆಡೆ ಪೊಲೀಸರು ಕಾವಲಿರಲಿದ್ದಾರೆ. ನೈಸರ್ಗಿಕ ಬಣ್ಣ ಬಳಸಿ ಎಂದು ಮನವಿ ಮಾಡಿದರು.

ವಕ್ಫ್  ಜಿಲ್ಲಾ ಸಲಹಾ ಸಮಿತಿ ಅಧ್ಯಕ್ಷ ಪೀರಾಹುಸೇನ ಹೊಸಳ್ಳಿ ಮಾತನಾಡಿ, ಹೋಳಿ&ರಂಜಾನ್ ಹಬ್ಬಗಳನ್ನು ನಾವೆಲ್ಲ ಸೌಹಾರ್ದಯುತವಾಗಿ ಆಚರಿಸಿಕೊಂಡು ಬಂದಿದ್ದೇವೆ. ಜನರ ಅಭಿವೃದ್ಧಿಗಾಗಿ ಹಬ್ಬಗಳಿರುವುದು. ಎಲ್ಲರೂ ಪರಸ್ಪರ ಸ್ನೇಹ&ಭಾಂದವ್ಯದಿಂದ ಹಬ್ಬಗಳ ಆಚರಣೆ ಮಾಡುತ್ತೆವೆ ಎಂದರು.

ವಿವಿಧ ಸಮುದಾಯಗಳ ಮುಖಂಡರು ಅಭಿಪ್ರಾಯ ಹಂಚಿಕೊಂಡರು. ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಎಎಸ್ಪಿ ಹೇಮಂತ್ ಕುಮಾರ್, ಉಪವಿಭಾಗಾಧಿಕಾರಿ ಕ್ಯಾ.ಮಹೇಶ್ ಮಾಲಗಿತ್ತಿ, ಡಿಯುಡಿಸಿ ಪಿಡಿ ರೇಷ್ಮಾ ಹಾನಗಲ್, ಡಿವೈಎಸ್ಪಿಗಳಾದ ಮುತ್ತಣ್ಣ ಸರವಗೋಳ, ಸಿದ್ದಲಿಂಗಪ್ಪಗೌಡ ಪಾಟೀಲ, ಪ್ರಮುಖರಾದ ಮುತ್ತೂರ ಸ್ವಾಮಿ ನರೇಗಲ್, ಉಮೇಶ ಕುರುಡೇಕರ್, ಮಾನ್ವಿ ಪಾಷಾ, ಎಸ್ಬಿ ಖಾದ್ರಿಸಾಬ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net