ಸವಾಲುಗಳ ನಡುವೆ ಪತ್ರಕರ್ತರು, ಸಚಿವ ಶಿವರಾಜ ತಂಗಡಗಿ ಅಭಿಮತ

district koppal media club minister shivaraj tangadagi
Published on

ಕೊಪ್ಪಳ: ಪತ್ರಕರ್ತರು ಸಾಕಷ್ಟು ಸವಾಲು ಎದುರಿಸುತ್ತಿದ್ದಾರೆ. ಅದರ ನಡುವೆಯೂ ನಮ್ಮ ಕೊಪ್ಪಳ ಪತ್ರಕರ್ತರು ಬಿಡುವು ಮಾಡಿಕೊಂಡು ನಾಟಕ ಪ್ರದರ್ಶನ ಮಾಡುತ್ತಿರುವುದು ಖುಷಿ ಹಾಗೂ ಹೆಮ್ಮೆ ವಿಷಯ ಎಂದು ಹಿಂದುಳಿದ ವರ್ಗಗಳ ಕಲ್ಯಾಣ, ಕನ್ನಡ ಮತ್ತು ಸಂಸತಿ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಹೇಳಿದರು.

ನಗರದ ಸಾಹಿತ್ಯ ಭವನದಲ್ಲಿ ರಾಷ್ಟ್ರೀಯ ಪತ್ರಿಕಾ ದಿನಾಚರಣೆ ಅಂಗವಾಗಿ ಕೊಪ್ಪಳ ಮೀಡಿಯಾ ಕ್ಲಬ್​ನಿಂದ ಶನಿವಾರ ಹಮ್ಮಿಕೊಂಡಿದ್ದ ಸಬ್​ ಎಡಿಟರ್​ ಸುಬ್ರಾಯ ಸತ್ತ ಮೇಲೆ ನಾಟಕ ಪ್ರದರ್ಶನ ಉದ್ಘಾಟಿಸಿ ಮಾತನಾಡಿದರು.

ನಮ್ಮ ಜಿಲ್ಲೆ ಪತ್ರಕರ್ತರು ಜಿಲ್ಲೆಯ ಸಮಸ್ಯೆಗಳ ಬಗ್ಗೆ ನಮ್ಮ ಗಮನ ಸೆಳೆವ ಕೆಲಸ ಮಾಡುತ್ತಾರೆ. ಅವರಿಗೂ ನನಗೂ ಅವಿನಾಭಾವ ಸಂಬಂಧ ಇದೆ. ಮೂರು ಬಾರಿ ಮಂತ್ರಿಯಾಗಿದ್ದು ನಮ್ಮ ಪತ್ರಕರ್ತರ ಬೌದ್ಧಿಕತೆ ಬಗ್ಗೆ ಹೆಮ್ಮೆ ಇದೆ. ಈ ಬಗ್ಗೆ ನಾನೂ ಬೇರೆ ಜಿಲ್ಲೆಗಳಿಗೆ ಹೋದಾಗ ಹೆಮ್ಮೆಯಿಂದ ಹೇಳಿಕೊಳ್ಳುತ್ತೇನೆ ಎಂದರು.

ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಬದುಕಿಗೆ ಮನರಂಜನೆ ಬಹುಮುಖ್ಯ. ಪತ್ರಕರ್ತರು ತಮ್ಮ ವೃತ್ತಿ ಇಷ್ಟ, ಕಷ್ಟಗಳ ಬಗ್ಗೆ ನಾಟಕ ಪ್ರದರ್ಶನ ಮಾಡುತ್ತಿದ್ದಾರೆ. ಯಶಸ್ವಿಯಾಗಲಿ ಎಂದು ಆಶಿಸಿದರು.

ಕಾಂಗ್ರೆಸ್​ ಜಿಲ್ಲಾಧ್ಯಕ್ಷ ಅಮರೇಗೌಡ ಬಯ್ಯಾಪುರ ಮಾತನಾಡಿ, ನಿಜ ಜೀವನದ ಘಟನೆಗಳೆ ಪಾತ್ರಗಳ ರೂಪದಲ್ಲಿ ನಾಟಕದಲ್ಲಿ ತೋರಿಸುವುದು ವಾಡಿಕೆ. ನಮ್ಮ ಜೀವನವೇ ನಾಟಕ. ನಾವು ಕೇವಲ ಪಾತ್ರಧಾರಿಗಳು. ನಮ್ಮ ಜವಾಬ್ದಾರಿ ಸರಿಯಾಗಿ ನಿಭಾಯಿಸಿದರೆ ಉತ್ತಮ ಸಮಾಜ ನಿಮಾರ್ಣ ಸಾಧ್ಯ ಎಂದರು.

ಬಿಜೆಪಿ ಜಿಲ್ಲಾಧ್ಯಕ್ಷ ನವೀನಕುಮಾರ ಗುಳಗಣ್ಣವರ ಮಾತನಾಡಿ, ಪತ್ರಕರ್ತರ ಪ್ರಯತ್ನಕ್ಕೆ ಯಶ ಸಿಗಲಿ. ಸಾಕಷ್ಟು ಒತ್ತಡ ನಡುವೆಯೂ ನಾಟಕ ಮಾಡುತ್ತಿರುವುದು ಮೆಚ್ಚುವಂಥದ್ದು ಎಂದು ತಿಳಿಸಿದರು.

ಜೆಡಿಎಸ್​ ರಾಜ್ಯ ಪ್ರಧಾನ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ.ಬಸವರಾಜ ಕ್ಯಾವಟರ್​, ವಾರ್ತಾ ಇಲಾಖೆ ಜಂಟಿ ನಿರ್ದೆಶಕ ಮಂಜುನಾಥ ಡೊಳ್ಳಿನ ಮಾತನಾಡಿದರು. ರಾಜ್ಯೋತ್ಸವ ಪ್ರಶಸ್ತಿ ಪುರಸತ ಅಲ್ಲಮಪ್ರಭು ಬೆಟ್ಟದೂರು, ಎ.ಜಿ.ಕಾರಟಗಿ, ಸುವರ್ಣ ಮಹೋತ್ಸವ ಪ್ರಶಸ್ತಿ ಪುರಸತ ರುಕ್ಮಿಣಿ ಬಾಯಿ, ಹವ್ಯಾಸಿ ಪತ್ರಕರ್ತ ಆನಂದತೀರ್ಥ ಪ್ಯಾಟಿ ಅವರನ್ನು ಸನ್ಮಾನಿಸಲಾಯಿತು.

ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​, ನಗರಾಭಿವೃದ್ಧಿ ಪ್ರಾಧಿಕಾರ ಅಧ್ಯಕ್ಷ ಶ್ರೀನಿವಾಸ ಗುಪ್ತಾ, ವಾರ್ತಾಧಿಕಾರಿ ಜಿ.ಸುರೇಶ, ಎಎಸ್ಪಿ ಹೇಮಂತ್​ ಕುಮಾರ್​, ವಕೀಲರ ಸಂಘದ ಜಿಲ್ಲಾಧ್ಯಕ್ಷ ಎ.ವಿ.ಕಣವಿ, ಪ್ರಮುಖರಾದ ತಿಪ್ಪೇರುದ್ರಸ್ವಾಮಿ, ವಿ.ಎಂ.ಭೂಸನೂರಮಠ, ಕೃಷ್ಣಾ ಇಟ್ಟಂಗಿ, ಭರಮಪ್ಪ ಹಟ್ಟಿ, ಗ್ಯಾರಂಟಿ ಯೋಜನೆ ಅನುಷ್ಠಾನ ಪ್ರಾಧಿಕಾರ ಜಿಲ್ಲಾಧ್ಯಕ್ಷ ರಡ್ಡಿ ಶ್ರೀನಿವಾಸ, ಎಸಿ ಕ್ಯಾ.ಮಹೇಶ ಮಾಲಗಿತ್ತಿ, ತಹಸೀಲ್ದಾರ್​ ವಿಠ್ಠಲ ಚೌಗಲಾ, ಮೀಡಿಯಾ ಕ್ಲಬ್​ ಸದಸ್ಯರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net