ಕೊಪ್ಪಳ: ದೇಶದ ಗಮನ ಸೆಳೆದಿದ್ದ ಮರಕುಂಬಿ ಅಸ್ಪೃಶ್ಯತೆ ಆಚರಣೆ ಪ್ರಕರಣದಲ್ಲಿ, ಕೊಪ್ಪಳ ಜಿಲ್ಲಾ ನ್ಯಾಯಾಲಯ 98 ಅಪರಾಧಿಗಳಿಗೆ ಜೀವಾವಧಿ, ಮೂವರಿಗೆ ಐದು ವರ್ಷ ಶಿಕ್ಷೆ ವಿಧಿಸಿತ್ತು. ಪ್ರಕರಣ ಕುರಿತು ಧಾರವಾಡ ಹೈ ಕೋರ್ಟ್ ಬುಧವಾರ 99 ಜನರಿಗೆ ಜಾಮೀನು ಮಂಜೂರು ಮಾಡಿದ್ದು, ಕೆಳ ಹಂತದ ನ್ಯಾಯಾಲಯ ನೀಡಿದ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ.
ಅಸ್ಪೃಶ್ಯತೆ ಆಚರಣೆ, ದೋಂಬಿ, ಹಲ್ಲೆ, ಗಲಾಟೆ ಪ್ರಕರಣದಲ್ಲಿ ಇಷ್ಟೊಂದು ಪ್ರಮಾಣದಲ್ಲಿ ಶಿಕ್ಷೆ ವಿಧಿಸಿದ ಮೊದಲ ಪ್ರಕರಣ ಎಂದು ಗಮನ ಸೆಳೆದಿತ್ತು. 98 ಅಪರಾಧಿಗಳಿಗೆ ಜೀವಾವಧಿ ಜೈಲು ಮತ್ತು ತಲಾ 5 ಸಾವಿರ ರೂ. ದಂಡ ವಿಧಿಸಲಾಗಿತ್ತು. ಮೂವರು ಎಸ್ಸಿ-ಎಸ್ಟಿ ಸಮುದಾಯದವರು ಎರಡು ಸಾವಿರ ದಂಡ ಹಾಗೂ ಐದು ವರ್ಷ ಶಿಕ್ಷೆಗೆ ಗುರಿಯಾಗಿದ್ದರು.
ಸದ್ಯ ಪ್ರಕರಣ ಧಾರವಾಡ ಹೈ ಕೋರ್ಟ್ ಮೆಟ್ಟಿಲೇರಿದೆ. ಬುಧವಾರ ವಿಚಾರಣೆ ನಡೆಸಿದ ನ್ಯಾಯಾಲಯ ಅರ್ಜಿ ಸಲ್ಲಿಸಿದ 99 ಜನರಿಗೆ ಜಾಮೀನು ಮಂಜೂರು ಮಾಡಿದೆ. ಒಟ್ಟು 101 ಅಪರಾಧಿಗಳ ಪೈಕಿ ಓರ್ವ ಮೃತಪಟ್ಟಿದ್ದಾನೆ. ಪ್ರಕರಣದ ಎ 1ಆರೋಪಿ ಅರ್ಜಿ ಸಲ್ಲಿಸದ ಕಾರಣ ಜಾಮೀನು ಸಿಕ್ಕಿಲ್ಲ.
ಘಟನೆ ನಡೆದಾಗ ನಾಲ್ಕು ಗುಡಿಸಲು ಸುಟ್ಟಿವೆ. ನಾಲ್ಕು ಬಡಿಗೆ, ಮೂರು ಇಟ್ಟಿಗೆ, ಐದು ಕಲ್ಲು ವಶಕ್ಕೆ ಪಡೆಯಲಾಗಿದೆ. 117ಜನರು ಇಷ್ಟೇ ವಸ್ತು ಬಳಸಿ ಗಲಭೆ ಮಾಡಿದ್ದಾರೆ. ಮಧ್ಯರಾತ್ರಿವರೆಗೂ ಪ್ರಕರಣ ದಾಖಲಾಗಿಲ್ಲ. ದೂರುದಾರ ತಮ್ಮವರು ಕೊಟ್ಟ ಪಟ್ಟಿಯಲ್ಲಿದ್ದವರನ್ನೇ ಆರೋಪಿಗಳೆಂದು ಬರೆಸಿದ್ದಾನೆ. ಮೂವರು ಎಸ್ಸಿ, ಎಸ್ಟಿಗಳಿದ್ದು ಅವರಿಂದಲೇ ಅಸ್ಪೃಶ್ಯತೆ ಆಚರಣೆ ಹೇಗೆ ಸಾಧ್ಯ ಎಂಬ ವಕೀಲರ ವಾದ ಆಲಿಸಿದ ಪೀಠ ಮಾನ್ಯ ಮಾಡಿ ಜಾಮೀನು ಮಂಜೂರು ಮಾಡಿದೆ. ಜಿಲ್ಲಾ ನ್ಯಾಯಾಲಯ ನೀಡಿದ ಆದೇಶಕ್ಕೆ ತಾತ್ಕಾಲಿಕವಾಗಿ ತಡೆ ನೀಡಿದೆ ಎಂದು ಅರ್ಜಿದಾರರ ಪರ ವಕೀಲ ಸಂತೋಷ ಮಲಗೌಡರ ತಿಳಿಸಿದರು.
ಏನಿದು ಪ್ರಕರಣ ? : ದೇಶಾದ್ಯಂತ ಗಮನ ಸೆಳೆದಿದ್ದ ಗಂಗಾವತಿ ತಾಲೂಕಿನ ಮರಕುಂಬಿಯಲ್ಲಿ 2014ರಲ್ಲಿ ದಲಿತರು ಮತ್ತು ಸವರ್ಣಿಯರ ನಡುವಿನ ಗಲಾಟೆಯಾಗಿತ್ತು. 2014ರ ಆಗಸ್ಟ್ 28 ರಂದು ಗಂಗಾವತಿ ನಗರದ ಶಿವೆ ಟಾಕೀಸ್ ನಲ್ಲಿ ಪವರ್ ಸಿನಿಮಾ ವೀಕ್ಷಣೆಗೆ ತೆರಳಿದ್ದ ಮರುಕುಂಬಿ ಗ್ರಾಮದ ಸವರ್ಣಿಯ ಮಂಜುನಾಥ ಹಾಗೂ ಇತರರ ನಡುವೆ ಗಲಾಟೆ ನಡೆದಿತ್ತು. ಇದೇ ವಿಷಯಕ್ಕೆ ಗ್ರಾಮದಲ್ಲಿ ಸವರ್ಣಿಯರು ದಲಿತರ ಮೇಲೆ ಹಲ್ಲೆ ನಡೆಸಿ, ನಾಲ್ಕು ಗುಡಿಸಲಿಗೆ ಬೆಂಕಿ ಹಚ್ಚಿದ್ದರು. ಈ ಕುರಿತು 117 ಜನರ ವಿರುದ್ಧ ಪ್ರಕರಣ ದಾಖಲಾಗಿದೆ. ಈ ಪೈಕಿ ಕೆಲವರು ಮರಣ ಹೊಂದಿದ್ದು, ಕೆಲವರ ಹೆಸರು ಪುನರಾವರ್ತನೆ ಆಗಿವೆ ಎನ್ನಲಾಗಿದೆ. ಬಾಕಿ 101 ಅಪರಾಧಿಗಳಿಗೆ ಅ.24ರಂದು ಶಿಕ್ಷೆ ವಿಧಿಸಲಾಗಿತ್ತು.