

ಕೊಪ್ಪಳ: ಕಳೆದ 11 ದಿನಗಳಿಂದ ನಗರದ ತೋಟಗಾರಿಕೆ ಇಲಾಖೆ ಆವರಣದಲ್ಲಿ ನಡೆದ ಮಾವು ಪ್ರದರ್ಶನ ಮತ್ತು ಮಾರಾಟ ಮೇಳದಲ್ಲಿ ಭರ್ತಿ 230 ಟನ್ ಮಾರಾಟ ನಡೆದಿದ್ದು, 1.90 ಕೋಟಿ ರೂ. ವ್ಯವಹಾರ ನಡೆದಿರುವುದು ವಿಶೇಷ.
ಮೇ 13ರಿಂದ 21ವರೆಗೆ ಇದ್ದ ಮೇಳವನ್ನು ಗ್ರಾಹಕರು ಹಾಗೂ ರೈತರ ಮನವಿ ಮೇರೆಗೆ ಮೇ 23ವರೆಗೆ ವಿಸ್ತರಿಸಲಾಯಿತು. ಕೇಸರ್, ದಶಹರಿ, ಮಲ್ಲಿಕಾ, ಇಮಾಮ್ ಪಸಂದ್, ಬೆನಶಾನ್, ರಸಪುರಿ, ಸ್ವರ್ಣರೇಖಾ, ಆಪೂಸ್, ಪುನಾಸ್, ತೋತಾಪುರಿ ಸೇರಿ 15ಕ್ಕೂ ಹೆಚ್ಚು ತಳಿಗಳು ಮಾರಾಟವಾಗಿವೆ. ಪುಮುಖವಾಗಿ ಕೇಸರ್ ಮತ್ತು ಬೆನಶಾನ್ಗೆ ಬೇಡಿಕೆ ಹೆಚ್ಚಿದ್ದು, 150 ಟನ್ ಹಾಗೂ ಇತರ ತಳಿಗಳು 80 ಟನ್ ಹಣ್ಣುಗಳು ಮಾರಾಟ ಆಗಿದೆ. ಆಮ್ಲೇಟ್ ಮತ್ತು ಪುನಾಸ್ ಉಪ್ಪಿನಕಾಯಿ ಹಣ್ಣುಗಳು 5 ಟನ್ಗೂ ಅಧಿಕ ವಹಿವಾಟು ನಡೆದಿದೆ. ತೋಟಗಾರಿಕೆ ಇಲಾಖೆ, ಹಾಪ್ಕಾಮ್ಸ್, ರೈತ ಉತ್ಪಾದಕ ಸಂಸ್ಥೆಗಳ ಮೂಲಕ ಮಾರಾಟ ನಡೆದಿದೆ.
60ಕ್ಕೂ ಹೆಚ್ಚು ರೈತರು ನೋಂದಾಯಿಸಿದ್ದು, 22 ಮಳಿಗೆಗಳನ್ನು ತೆರೆದು ಅವಕಾಶ ನೀಡಲಾಯಿತು. ನೈಸರ್ಗಿಕವಾಗಿ ಮಾಗಿಸಿದ ಹಣ್ಣುಗಳನ್ನು ಗ್ರಾಹಕರು ಹಾಗೂ ರೈತರಿಗೆ ಕೈಗೆಟಕುವ ದರದಲ್ಲಿ ವಿತರಿಸಲಾಗಿದೆ. ಮಾವು ಬೆಳೆಗಾರರಾದ ಆನಂದ ರೆಡ್ಡಿ, ಪಂಪಣ್ಣ ಇಂದರಗಿ, ಷಣ್ಮುಖಪ್ಪ, ಶಿವಣ್ಣ ಹೊಸಮನಿ, ನಾಗಪ್ಪ, ವೀರಭದ್ರ ಸ್ವಾಮಿ ಇತರರು ಮೇಳದಿಂದ ತಮಗೆ ಮಾರುಕಟ್ಟೆ ಸಮಸ್ಯೆ ನೀಗಿದೆ. ಉತ್ತಮ ಆದಾಯ ಗಳಿಕೆಯಾಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು. ಜಿಲ್ಲೆ, ಹೊರ ಜಿಲ್ಲೆಗಳಿಂದ ಅಧಿಕಾರಿಗಳು, ಸಾರ್ವಜನಿಕರು ಭೇಟಿ ನೀಡಿದ್ದು ಮೇಳದ ಬಗ್ಗೆ ಪ್ರಶಂಸಿದರು. ಬಳ್ಳಾರಿ, ಗದಗ, ಧಾರವಾಡ, ಬಾಗಲಕೋಟೆ, ವಿಜಯಪುರ, ವಿಜಯನಗರ ಜಿಲ್ಲೆಗಳಿಂದ ರೈತರು ಆಗಮಿಸಿ ಮಾಹಿತಿ ಪಡೆದರು.
ಹೊರ ರಾಜ್ಯಗಳಿಗೆ
ಕೇಸರ್ ಮಾವಿಗೆ ಬೇಡಿಕೆ ಹೆಚ್ಚಿದ್ದು, 2.5 ಕೆಜಿ ತೂಕದ ಕೊಪ್ಪಳ ಮಾವು ಬ್ರ್ಯಾಂಡ್ ಸೃಷ್ಟಿಸಲಾಗಿದೆ. 10 ಸಾವಿರ ಬಾಕ್ಸ್ಗಳನ್ನು ಬೆಂಗಳೂರು, ದೆಹಲಿ, ಹೈದ್ರಾಬಾದ್, ಹುಬ್ಬಳ್ಳಿ, ಮಂಗಳೂರು ಸೇರಿ ವಿವಿಧೆಡೆ 40 ಟನ್ಗೂ ಹೆಚ್ಚಿನ ಮಾವು ರ್ತಾಗಿರುವುದು ವಿಶೇಷ. ರಟ್ಟಿನ್ ಬಾಕ್ಸ್ಗಳನ್ನು ಆರ್ಕೆವಿವೈ ಯೋಜನೆಯಡಿ ಸಹಾಯಧನ ಮೂಲಕ ಪೂರೈಸಲಾಗಿದೆ. 11 ದಿನದಲ್ಲಿ 30 ಸಾವಿರಕ್ಕೂ ಅಧಿಕ ಜನ ಭೇಟಿ ನೀಡಿದ್ದು, 230 ಟನ್ ಮಾವು ಮಾರಾಟವಾಗಿದ್ದು, 1.90 ಕೋಟಿ ರೂ. ದಾಖಲೆ ವಹಿವಾಟು ನಡೆದಿದೆ.
ಮಿಯಾ ಜಾಕಿ ಆಕರ್ಷಣೆ
ಜಗತ್ತಿನ ದುಬಾರಿ ಮಾವು ಎಂದು ಖ್ಯಾತಿಯಾದ ಜಪಾನಿನ ಮಿಯಾ ಜಾಕಿ ಮಾವು ಮೇಳದ ಆಕರ್ಷಣೆಯಾಯಿತು. ಅನೇಕರು ಹಣ್ಣು ನೋಡಿ ಖಷಿ ಪಟ್ಟಿದ್ದಲ್ಲದೇ ಅದರೊಟ್ಟಿಗೆ ಸೆಲ್ಫಿ ತೆಗೆಸಿಕೊಂಡು ಸಂಭ್ರಮಿಸಿದರು. ಈ ಬಗ್ಗೆ ಅನೇಕ ರೈತರು ಮಾಹಿತಿ ಪಡೆದಿದ್ದಾರೆ. ತಾವು ಬೆಳೆಯಲು ಮುಂದೆ ಬಂದಿದ್ದಾರೆ. ಮುಂದಿನ ವರ್ಷದೊಳಗೆ 1 ಸಾವಿರ ಎಕರೆಯಷ್ಟು ಮಾವು ಬೆಳೆ ವಿಸ್ತೀರ್ಣ ಆಗುವ ಸಾಧ್ಯತೆ ಹುಟ್ಟುಹಾಕಿದೆ.
ಹಿಂದಿಗಿಂತಲೂ ಈ ಬಾರಿ ಮಾವು ಮೇಳ ಯಶಸ್ವಿಯಾಗಿದೆ. 230 ಟನ್ ಮಾವು ಮಾರಾಟವಾಗಿದ್ದು, 1.90 ಕೋಟಿ ರೂ. ವಹಿವಾಟು ನಡೆದಿದೆ. ಮಿಯಾ ಜಾಕಿ ಮಾವಿನ ಬಗ್ಗೆ ಅನೇಕರು ಮಾಹಿತಿ ಪಡೆದಿದ್ದಾರೆ. ಕೆಲವರು ಈಗಾಗಲೇ ಬೆಳೆಯುತ್ತಿದ್ದಾರೆ. ಮುಂದಿನ ವರ್ಷದ ಮೇಳದಲ್ಲಿ ಮಿಯಾ ಜಾಕಿ ಮಾವು ಮಾರಾಟಕ್ಕೆ ಬರುವ ಭರವಸೆ ಇದೆ. ಮೇಳದಿಂದ ರೈತರು ಹಾಗೂ ಗ್ರಾಹಕರಿಗೆ ಅನುಕೂಲವಾಗಿದೆ. ಕೃಷ್ಣ ಉಕ್ಕುಂದ. ತೋಟಗಾರಿಕೆ ಉಪ ನಿರ್ದೇಶಕ ಕೊಪ್ಪಳ.
ಕೃಷ್ಣ ಉಕ್ಕುಂದ. ತೋಟಗಾರಿಕೆ ಉಪ ನಿರ್ದೇಶಕ ಕೊಪ್ಪಳ.