

ಕೊಪ್ಪಳ: ನರೇಗಾ ಯೋಜನೆಯಡಿ ಕೊಪ್ಪಳ ತಾಲೂಕಿನ ಕಾಮನೂರು, ಮೋರನಾಳ ಗ್ರಾಮಗಳನ್ನು ದತ್ತು ಪಡೆಯಲಾಗಿದೆ. ಎರಡೂ ಗ್ರಾಮಗಳ ಸರ್ವಾಂಗೀಣ ಅಭಿವೃದ್ಧಿ ಮಾಡಲಾಗುವುದೆಂದು ಸಂಶದ ರಾಜಶೇಖರ ಹಿಟ್ನಾಳ ಹೇಳಿದರು.
ಕಳೆದ ತಿಂಗಳು ದಿಶಾ ಸಮಿತಿ ಸಭೆಯಲ್ಲಿ ನಿರ್ಧರಿಸಿದಂತೆ ಎರಡು ಗ್ರಾಮ ದತ್ತು ಪಡೆದಿದ್ದೇವೆ. ನರೇಗಾದಡಿ ಲಭ್ಯ ಅನುದಾನ ಹಾಗೂ ಸಂಸದರ ಅನುದಾನ ಒದಗಿಸಲಾಗುವುದು. ಗ್ರಾಮಗಳ ಅಭಿವೃದ್ಧಿ ಮಹಾತ್ಮ ಗಾಂಧೀಜಿ ಕನಸು. ಅದರಂತೆ ಎರಡು ಗ್ರಾಮ ಸಂಪೂರ್ಣ ಅಭಿವೃದ್ಧಿಪಡಿಸುವ ಗುರಿ ಹಾಕಿಕೊಂಡಿದ್ದೇವೆ. 2024&25ನೇ ಸಾಲಿನ ಅನುದಾನದಲ್ಲಿ ಕ್ರಿಯಾ ಯೋಜನೆ ರಚಿಸಲಾಗಿದೆ. ಮೂರು ತಿಂಗಳಲ್ಲಿ ಕಾಮಗಾರಿ ಪೂರ್ಣಗೊಳಿಸುವ ಗುರಿ ಹಾಕಿಕೊಂಡಿದ್ದೇವೆ ಎಂದು ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.
ಎರಡೂ ಗ್ರಾಮಗಳಲ್ಲಿ ರಸ್ತೆ, ಕೆರೆ, ವೈಯಕ್ತಿಕ ಕೃಷಿ ಹೊಂಡ, ಬದು ನಿಮಾರ್ಣ, ದನದ ದೊಡ್ಡಿ, ಕುರಿ-ಮೇಕೆ ಸಾಕಾಣೆ ಶೆಡ್, ಶಾಲಾ ಕಾಂಪೌಂಡ್, ಶೌಚಗೃಹ, ಆಟದ ಮೈದಾನ, ಮಳೆ ನೀರು ಕೊಯ್ಲು, ಅಡುಗೆ ಕೋಣೆ, ಅಂಗನವಾಡಿ, ಚರಂಡಿ, ಸ್ಮಶಾನ ಅಭಿವೃದ್ಧಿಗೆ ಆದ್ಯತೆ ನೀಡಲಾಗಿದೆ. ಮೋರನಾಳ ಗ್ರಾಮಕ್ಕೆ 4.98 ಕೋಟಿ ರೂ. ಕಾಮನೂರಿಗೆ 4.62 ಕೋಟಿ ರೂ. ಅನುದಾನ ಮೀಸಲಿಡಲಾಗುವುದು. ಬೀದಿ ದೀಪಕ್ಕೆ ಸಂಸದರ ಪ್ರದೇಶಾಭಿವೃದ್ಧಿ ನಿಧಿಯಡಿ ತಲಾ 15 ಲಕ್ಷ ರೂ. ಒದಗಿಸಲಾಗುವುದು. ಇಂದು (ನ.30)ರಂದು ಕಾಮಗಾರಿಗೆ ಚಾಲನೆ ನೀಡಲಾಗುವುದು. ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ, ಶಾಸಕರು ಸೇರಿ ಜನಪ್ರತಿನಿಧಿಗಳು, ಜಿಪಂ ಅಧಿಕಾರಿಗಳು ಭಾಗಿಯಾಗುವರೆಂದು ವಿವರಿಸಿದರು.
ದಿಶಾ ಸಮಿತಿ ಸದಸ್ಯರಾದ ಸರಸ್ವತಿ ಇಟ್ಟಂಗಿ, ಅಂಬಣ್ಣ, ನಗರಸಭೆ ಸದಸ್ಯ ರಾಜಶೇಖರ ಆಡೂರು, ಕಾಂಗ್ರೆಸ್ ಮುಖಂಡ ಕೃಷ್ಣ ಇಟ್ಟಂಗಿ ಇದ್ದರು.