ರಸ್ತೆ ದುರಸ್ತಿ ಮಾಡಿಸಲು ಆಗ್ರಹಿಸಿ ವಿದ್ಯಾರ್ಥಿಗಳ ಪ್ರತಿಭಟನೆ

district koppal madinoor village students protest
Published on

ಕೊಪ್ಪಳ: ತಾಲೂಕಿನ ಮಾದಿನೂರು&ಮುದ್ಲಾಪುರ&ಕಿನ್ನಾಳ ರಸ್ತೆ ದುರಸ್ತಿಗೆ ಆಗ್ರಹಿಸಿ ಶಾಲಾ ಮಕ್ಕಳು ಶುಕ್ರವಾರ ರಸ್ತೆ ತಡೆ ನಡೆಸಿ ದಿಢೀರ್​ ಪ್ರತಿಭಟನೆ ನಡೆಸಿದರು.

ಹಲವು ವರ್ಷಗಳಿಂದ ರಸ್ತೆ ಹಾಳಾಗಿದೆ. ಪರಿಣಾಮ ಬಸ್​ ಸಂಚಾರ ಸರಿಯಾಗಿ ಆಗುತ್ತಿಲ್ಲ. ಇದರಿಂದ ನಿತ್ಯ ಶಾಲಾ&ಕಾಲೇಜಿಗೆ ಹೋಗಿ ಬರುವುದು ಸಮಸ್ಯೆಯಾಗಿದೆ. 40&50 ಮಕ್ಕಳು ಕಿನ್ನಾಳ ಶಾಲೆಗೆ ಹೋಗುತ್ತೇವೆ. ನಿತ್ಯ ತಡವಾಗಿ ಹೋಗುವುದರಿಂದ ತರಗತಿಗಳಿಗೆ ಹಾಜರಾಗಲು ಆಗುತ್ತಿಲ್ಲ. ಶಿಕ್ಷಕರು ಬೈದು, ಹೊರ ನಿಲ್ಲಿಸುತ್ತಾರೆ. ಹಲವು ಬಾರಿ ರಸ್ತೆ ಸರಿಪಡಿಸುವಂತೆ ಮನವಿ ಮಾಡಿದ್ದೇವೆ. ಸಾರಿಗೆ ಅಧಿಕಾರಿಗಳು ರಸ್ತೆ ದುರಸ್ತಿ ಆಗುವವರೆಗೆ ಬಸ್​ ಸಂಚಾರ ಸುಗಮವಾಗುವುದಿಲ್ಲವೆಂದು ಹೇಳುತ್ತಿದ್ದಾರೆ. ಇದರಿಂದ ನಾವು ಶಾಲೆಗೆ ಹೋಗುವುದು ಯಾವಾಗ ಎಂದು ಸಮಸ್ಯೆ ಹೇಳಿಕೊಂಡರು.

ಪ್ರತಿಭಟನೆ ವಿಷಯ ತಿಳಿದು 112 ಪೊಲೀಸರು ಸ್ಥಳಕ್ಕೆ ಬಂದರು. ಮಕ್ಕಳಿಂದ ಸಮಸ್ಯೆ ಪಟ್ಟಿ ಪಡೆದರು. ಸಾರಿಗೆ ಅಧಿಕಾರಿಗಳು ಸರಿಯಾದ ಬಸ್​ ಬಿಡುವ ಭರವಸೆ ನೀಡಿದರು. ನಿತ್ಯವೂ ಶಾಲಾ ಸಮಯಕ್ಕೆ ಬಸ್​ ಬಿಡಬೇಕು. ರಸ್ತೆ ಆದಷ್ಟು ಬೇಗನೆ ದುರಸ್ತಿ ಮಾಡಬೇಕೆಂದು ಮಕ್ಕಳು ಆಗ್ರಹಿಸಿದರು. ಗ್ರಾಮಸ್ಥರು ಮಕ್ಕಳ ಪ್ರತಿಭಟನೆಗೆ ಸಾಥ್​ ನೀಡಿದರು. ಬೆಳಗ್ಗೆಯಿಂದ ಮಧ್ಯಾಹ್ನವರೆಗೆ ರಸ್ತೆ ತಡೆ ನಡೆಸಿದ್ದರಿಂದ ಟ್ರಾಫಿಕ್​ ಉಂಟಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net