ಕಾಲುವೆಗೆ ಹಾರಿದ್ದ ಪ್ರೇಮಿಗಳ ಶವ ಪತ್ತೆ

Published on

ಕೊಪ್ಪಳ: ಮನೆಯವರಿಗೆ ಹೆದರಿ ಮುನಿರಾಬಾದ್​ ತುಂಗಭದ್ರಾ ಎಡದಂಡೆ ನಾಲೆಗೆ ಹಾರಿದ್ದ ಪ್ರೇಮಿಗಳಿಬ್ಬರ ಮೃತದೇಹ ಶಿವಪುರ ಕೆರೆಯಲ್ಲಿ ಶುಕ್ರವಾರ ಪತ್ತೆಯಾಗಿವೆ.

ಸಣಾಪುರದ ಅಂಜಲಿ (18), ಹೊಸಲಿಂಗಾಪುರದ ಪ್ರವಿಣಕುಮಾರ್​ (18) ಮೃತರು. ಪರಸ್ಪರ ಪ್ರೀತಿಸುತ್ತಿದ್ದ ಜೋಡಿ, ಮನೆಯವರಿಗೆ ಪ್ರೀತಿ ವಿಷಯ ಹೇಳಿದೆ. ಅವರು ಒಪ್ಪದ ಕಾರಣ ಕೆಲ ದಿನಗಳ ಹಿಂದೆ ಮನೆ ಬಿಟ್ಟು ಓಡಿ ಹೋಗಿದ್ದರು. ಹಗರಿಬೊಮ್ಮನಹಳ್ಳಿಯಲ್ಲಿ ಇರುವ ವಿಷಯ ಕುಟುಂಬದವರಿಗೆ ಗೊತ್ತಾಗಿದೆ. ಬಳಿಕ ಕರೆತರಲು ಕಾರ್​ ಕಳಿಸಿದ್ದಾರೆ. ಮುನಿರಾಬಾದ್​ವರೆಗೆ ಬಂದ ಪ್ರೇಮಿಗಳು ಕುಟುಂಬದವರ ಕೈಗೆ ಸಿಕ್ಕರೆ ಅನಾಹುತ ಆಗುವುದೆಂದು ಹೆದರಿ ಬುಧವಾರ ಸಂಜೆ ಕಾಲುವೆಗೆ ಹಾರಿದ್ದರು.

ಗುರುವಾರ ಇಡೀ ದಿನ ಅಗ್ನಿಶಾಮಕ ದಳ ಸಿಬ್ಬಂದಿ, ಪೊಲೀಸರು ಹುಡುಕಾಟ ನಡೆಸಿದರೂ ಪತ್ತೆಯಾಗಿರಲಿಲ್ಲ. ಕೊಪ್ಪಳ ತಾಲೂಕಿನ ಶಿವಪುರ ಕೆರೆಯಲ್ಲಿ ಶುಕ್ರವಾರ ಬೆಳಗ್ಗೆ ಮೃತದೇಹಗಳು ಪತ್ತೆಯಾಗಿವೆ. ಕಾಲುವೆಗೆ ಹಾರುವಾಗ ಇಬ್ಬರು ಬೇರೆ ಆಗದಿರಲೆಂದು ಕೈಗೆ ವೇಲ್​ ಕಟ್ಟಿಕೊಂಡಿದ್ದಾರೆ. ಸತ್ತ ಬಳಿಕವೂ ಕೈಗೆ ಕಟ್ಟಿಕೊಂಡ ಬಟ್ಟೆ ಕದಲಿಲ್ಲ. ಇಬ್ಬರ ಮೃತದೇಹಗಳು ಒಟ್ಟಿಗೆ ಸಿಗುವಂತಾಗಿದೆ. ಸಾಯುವಾಗಲೂ ಜೊತೆಗಿರಬೇಕೆಂದು ನಿರ್ಧರಿಸಿದ್ದ ಪ್ರೇಮಿಗಳು ಕೈಗೆ ಬಟ್ಟೆಕಟ್ಟಿಕೊಂಡಿದ್ದನ್ನು ಕಂಡು ನೆರೆದವರು ಮರುಗಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net