ತನಿಖಾ ಹಂತದಲ್ಲೇ ಡಿವೈಎಸ್ಪಿ ವರ್ಗಾವಣೆ, ಅನುಮಾನ ಮೂಡಿಸಿದ ಸರ್ಕಾರದ ನಡೆ

Published on

ಕೊಪ್ಪಳ: ನಗರಸಭೆ ಕಚೇರಿ, ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮನೆ ಮೇಲೆ ದಾಳಿ ನಡೆಸಿ ದಾಖಲೆ ಪರಿಶೀಲನೆ ನಡೆಸುವ ಹಂತದಲ್ಲೇ ಲೋಕಾಯುಕ್ತ ಡಿವೈಎಸ್ಪಿ ವಸಂತಕುಮಾರ್​ ಅವರನ್ನು ವರ್ಗಾವಣೆಗೊಳಿಸಿರುವುದು ಹಲವು ಅನುಮಾನ ಮೂಡಿಸಿದೆ.

ನಗರಸಭೆಯಲ್ಲಿ ವ್ಯಾಪಕ ಭ್ರಷ್ಟಾಚಾರ ಆರೋಪ ಕೇಳಿ ಬಂದಿದೆ. 336 ಕಾಮಗಾರಿಗಳಲ್ಲಿ ಸುಮಾರು 10 ಕೋಟಿ ರೂ.ಗೂ ಅಧಿಕ ಅವ್ಯವಹಾರ ನಡೆದಿದೆ ಎನ್ನಲಾಗಿದೆ. ಈ ಸಂಬಂಧ ಸೆ.16ರಂದು ಬೆಳಗ್ಗೆ ಲೋಕಾಯುಕ್ತ ಪೊಲೀಸರು ನಗರಸಭೆ ಕಚೇರಿ ಮೇಲೆ ದಾಳಿ ನಡೆಸಿದ್ದರು. ಮತ್ತೊಂದೆಡೆ ನಗರಸಭೆ ಕಿರಿಯ ಇಂಜಿನಿಯರ್​ ಸೋಮಲಿಂಗಪ್ಪ, ಕಂದಾಯ ನಿರೀಕ್ಷಕ ಉಜ್ವಲ್​ ಹಾಗೂ ನಗರಸಭೆ ಅಧ್ಯಕ್ಷ ಅಮ್ಜದ್​ ಪಟೇಲ್​ ಸಹೋದರ ಶಕೀಲ್​ ಮತ್ತು ಪ್ರವಿಣ ಕಂದಾರಿ ನಿವಾಸದ ಮೇಲೂ ದಾಳಿಯಾಗಿತ್ತು. ಮಂಗಳವಾರ ಸಂಜೆ ವೇಳೆಗೆ ಅಧಿಕಾರಿಗಳು ಹಾಗೂ ಗುತ್ತಿಗೆದಾರನ ಮನೆಯಲ್ಲಿ ದಾಖಲೆ ವಶಕ್ಕೆ ಪಡೆದ ತನಿಖಾಧಿಕಾರಿಗಳು ನಗರಸಭೆಯಲ್ಲಿ ಗುರುವಾರದವರೆಗೂ ದಾಖಲೆ ಪರಿಶೀಲನೆ ನಡೆಸಿದರು.

ಆದರೆ, ಮಂಗಳವಾರ ಸಂಜೆ ವೇಳೆಗೆ ಡಿವೈಎಸ್ಪಿ ವಸಂತ ಕುಮಾರ್​ ಅವರನ್ನು ವರ್ಗಾವಣೆ ಮಾಡಿ ಲೋಕಾಯುಕ್ತ ಕಚೇರಿ ಆದೇಶ ಹೊರಡಿಸಿರುವುದು ಸಾಕಷ್ಟು ಅನುಮಾನಕ್ಕೆ ಎಡೆ ಮಾಡಿಕೊಟ್ಟಿದೆ. ಕಳೆದ 6 ತಿಂಗಳ ಹಿಂದಷ್ಟೇ ವಸಂತ ಕುಮಾರ್​ ಕೊಪ್ಪಳ ಲೋಕಾಯುಕ್ತ ಡಿವೈಎಸ್ಪಿಯಾಗಿ ವರ್ಗವಾಗಿ ಬಂದಿದ್ದರು. ಹೀಗಿದ್ದರೂ ಏಕಾಏಕಿ ವರ್ಗಾವಣೆ ಮಾಡಲಾಗಿದೆ. ಬೇರೆ ಸ್ಥಳವನ್ನೂ ಸೂಚಿಸಿಲ್ಲ. ಕೊಪ್ಪಳಕ್ಕೂ ಬೇರೋಬ್ಬ ಅಧಿಕಾರಿಯನ್ನು ನಿಯೋಜಿಸಿಲ್ಲ. ಗುರುವಾರ ಒತ್ತಡ ಹಾಕಿ ಪಿಐಗೆ ಪ್ರಭಾರವಹಿಸಿ ಕೇಂದ್ರ ಕಚೇರಿಯಲ್ಲಿ ವರದಿ ಮಾಡಿಕೊಳ್ಳುವಂತೆ ವಸಂತ ಕುಮಾರ್​ಗೆ ನಿರ್ದೇಶಿಸಿದ್ದು ಸರ್ಕಾರವೇ ಭ್ರಷ್ಟರ ರಕ್ಷಣೆಗೆ ಮುಂದಾಗಿದೆ ಎಂಬ ಗುಮಾನಿಗೆ ಕನ್ನಡಿಯಾಗಿದೆ.

ಶಾಸಕ-ಸಂಸದರ ಕೈವಾಡ ?

ಅಧಿಕಾರಿ ವರ್ಗಾವಣೆಗೆ ಶಾಸಕ ರಾವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ ಕಾರಣ. ನಗರಸಭೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರ ನಡೆದಿದೆ. ಅಧ್ಯಕ್ಷರ ಸಹೋದರನ ಮನೆ ಮೇಲೂ ದಾಳಿ ನಡೆದಿದೆ. ಹೀಗಾಗಿ ಸರ್ಕಾರಕ್ಕೆ ಒತ್ತಡ ಹಾಕಿ ವಸಂತ್​ ಕುಮಾರ್​ ಅವರನ್ನು ವರ್ಗಾವಣೆ ಮಾಡಿಸಿದ್ದಾರೆ. ಭ್ರಷ್ಟರಿಗೆ ಬೆನ್ಗಾವಲಾಗಿ ನಿಂತಿದ್ದಾರೆ. ಭ್ರಷ್ಟರ ಬೆಂಬಲಕ್ಕೆ ನಿಂತಿದ್ದಾರೆಂದು ವಿಪಕ್ಷಗಳು ಆರೋಪಿಸುತ್ತಿವೆ. ಸಾಮಾಜಿಕ ಜಾಲತಾಣಗಳಲ್ಲೂ ಅಧಿಕಾರಸ್ಥರ ವಿರುದ್ಧ ಟೀಕೆಗಳು ವ್ಯಕ್ತವಾಗುತ್ತಿವೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net