172 ಕಾಮಗಾರಿ ದಾಖಲೆ ವಶ ಬಾಕಿ

district koppal lokayukta police ride cmc koppal
Published on

ಕೊಪ್ಪಳ: ನಗರಸಭೆಯಲ್ಲಿ ನಡೆದ ಅಕ್ರಮ ಸಂಬಂಧ ನಡೆದ ಲೋಕಾಯುಕ್ತ ದಾಳಿಯಲ್ಲಿ ತನಿಖಾಧಿಕಾರಿಗಳು ಒಟ್ಟು 158 ಕಾಮಗಾರಿಗಳ ದಾಖಲೆ ವಶಕ್ಕೆ ಪಡೆದಿದ್ದಾರೆ. ಬಾಕಿ 172 ಕಾಮಗಾರಿಗಳ ದಾಖಲೆ ಪರಿಶೀಲನೆ ವೇಳೆ ಸಿಕ್ಕಿಲ್ಲ. ಅವುಗಳನ್ನು ಸಲ್ಲಿಸುವಂತೆ ಅಧಿಕಾರಿಗಳಿಗೆ ತಾಕೀತು ಮಾಡಿದ್ದಾರೆ.

ನಗರದ ಶಕ್ತಿ ಕೇಂದ್ರವಾದ ನಗರಸಭೆ ಅಭಿವೃದ್ಧಿಗಿಂತ ಅಕ್ರಮಕ್ಕೆ ಹೆಚ್ಚು ಹೆಸರಾಗುತ್ತಿದೆ. ಈ ಅವಧಿಯಲ್ಲಿ ನಗರಸಭೆಯಿಂದ ಹೇಳಿಕೊಳ್ಳುವಂಥ ಕಾಮಗಾರಿಗಳು ನಡೆದಿಲ್ಲ. ಮಾಡಿದ ಕಾಮಗಾರಿಗಳೂ ಅರೆಬರೆ ಎಂಬಂತಾಗಿವೆ. 2023-24ನೇ ಸಾಲಿನಲ್ಲಿ ನಡೆದ 330 ಕಾಮಗಾರಿಗಳಲ್ಲಿ ಬಹುದೊಡ್ಡ ಅಕ್ರಮ ನಡೆದಿದೆ ಎಂಬ ಗುಮಾನಿ ಇದೆ. ಈ ಸಂಬಂಧ ಲೋಕಾಯುಕ್ತಕ್ಕೆ ದೂರು ಸಲ್ಲಿಕೆಯಾಗಿದೆ. 10 ಕೋಟಿ ರೂ.ಗೂ ಅಧಿಕ ಅನುದಾನ ದುರ್ಬಳಕೆಯಾದ ಗಂಭೀರ ಆರೋಪವಿದೆ. ಪ್ರಮುಖವಾಗಿ ರಸ್ತೆ, ಚರಂಡಿ, ನೀರಿನ ಕಾಮಗಾರಿಗಳು ಹಾಗೂ ಇನ್ನಿತರ ಮೂಲ ಸೌಕರ್ಯ ಕಾಮಗಾರಿಗಳೇ ಆಗಿವೆ ಎಂದು ಮೂಲಗಳಿಂದ ತಿಳಿದು ಬಂದಿದೆ.

ಇದೇ ಕಾರಣಕ್ಕೆ ಮಂಗಳವಾರ ಲೋಕಾಯುಕ್ತ ಪೊಲೀಸರು ನಗರಸಭೆ ಕಚೇರಿ ಮೇಲೆ ದಾಳಿ ನಡೆಸಿದ್ದರು. ಅಧಿಕಾರಿಗಳಾದ ಸೋಮಲಿಂಗಪ್ಪ, ಉಜ್ವಲ್​, ಗುತ್ತಿಗೆದಾರರಾದ ಶಕೀಲ್​, ಪ್ರವಿಣ ಕಂದಾರಿ ನಿವಾಸದ ಮೇಲೂ ದಾಳಿಯಾಗಿತ್ತು. ಡಿವೈಎಸ್ಪಿ ವಸಂತ ಕುಮಾರ್​ ಎಲ್ಲ ದಾಖಲೆಗಳನ್ನು ಜಾಲಾಡಿದ್ದರು. ದಾಳಿಗೂ ಮುನ್ನ ಅಧಿಕಾರಿಗಳು ಹಾಗೂ ಗುತ್ತಿಗೆದಾರರಿಗೆ ಮಾಹಿತಿ ಇತ್ತೆಂಬುದನ್ನು ಅರಿತು ಲೋಕಾಯುಕ್ತ ಪೊಲೀಸರು ದಂಗಾಗಿದ್ದರು. ಎಲ್ಲ ಕಾಮಗಾರಿಗಳ ವಿವರ ಕಲೆ ಹಾಕುವಾಗಲೇ ಡಿವೈಎಸ್ಪಿ ವಸಂತ ಕುಮಾರ್​ ವರ್ಗಾವಣೆ ಆಗಿದೆ.

ಇದು ಮತ್ತಷ್ಟು ಅನುಮಾನಕ್ಕೆ ಕಾರಣವಾಗಿದೆ. ಒಟ್ಟು 330 ಕಾಮಗಾರಿಗಳಲ್ಲಿ ತನಿಖಾಧಿಕಾರಿಗಳಿಗೆ ಈವರೆಗೆ 158 ಕಾಮಗಾರಿಗಳ ದಾಖಲೆಪತ್ರಗಳು ಸಿಕ್ಕಿವೆ. ಬಾಕಿ 172 ಕಾಮಗಾರಿಗಳ ದಾಖಲೆಗಳು ಸಿಕ್ಕಿಲ್ಲ. ಅವುಗಳಿಗೆ ಸಂಬಂಧಿಸಿದ ದಾಖಲೆ ಸಲ್ಲಿಸುವಂತೆ ನಗರಸಭೆ ಅಧಕಾರಿಗಳಿಗೆ ಸೂಚನೆ ನೀಡಿದ್ದಾರೆ. ಕಾಮಗಾರಿ ನಡೆದ ಅವಧಿಯಲ್ಲಿ ಪೌರಾಯುಕ್ತರಾಗಿದ್ದ ಗಣಪತಿ ಪಾಟೀಲ್​, ಎಇಇ ಮಧುರಾ, ಜೆಇ ಸೋಮಲಿಂಗಪ್ಪ ವಿರುದ್ಧ ಆರೋಪ ಕೇಳಿ ಬಂದಿವೆ. ಕಾಮಗಾರಿ ನಿರ್ವಹಿಸಿದ ಗುತ್ತಿಗೆದಾರರ ಮೇಲೂ ಅನುಮಾನದ ಹುತ್ತ ನಿರ್ಮಾಣವಾಗಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net