ಸರ್ಕಾರಿ ಆಸ್ಪತ್ರೆಯಲ್ಲಿ ಹೊರಗಿನಿಂದ ಔಷಧ ತರಿಸುವಂತಿಲ್ಲ

district koppal lokayukta meeting dc office koppal suresh itnal
Published on

ಕೊಪ್ಪಳ: ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಅಗತ್ಯ ಔಷಧ ನೀಡಿ. ಹೊರಗೆ ತರುವಂತೆ ಬರೆದುಕೊಡಕೂಡದು ಎಂದು ಉಪ ಲೋಕಾಯುಕ್ತ ನ್ಯಾ.ಬಿ.ವೀರಪ್ಪ ತಾಕೀತು ಮಾಡಿದರು.

ಗುರುವಾರ ಜಿಲ್ಲೆಯ ವಿವಿಧ ಅಧಿಕಾರಿಗಳೊಂದಿಗೆ ವಿಡಿಯೋ ಸಂವಾದ ಸಭೆ ನಡೆಸಿ ಮಾತನಾಡಿದರು.

ಲೋಕಾಯುಕ್ತದಲ್ಲಿ ಕೊಪ್ಪಳದ 105 ಪ್ರಕರಣ ಬಾಕಿ ಇವೆ. ಉಪ ವಿಭಾಗಾಧಿಕಾರಿ, ತಹಸೀಲ್ದಾರ್​ ಸೇರಿ ಕಂದಾಯ ಅಧಿಕಾರಿಗಳಿಗೆ ಸೂಚಿಸಿ ಪ್ರಕರಣ ಮುಗಿಸಲು ಸಹಕರಿಸಿ. ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹೊರಗಿನಿಂದ ಔಷಧ ತರುವಂತೆ ಸೂಚಿಸುವಂತಿಲ್ಲ. ವೈದ್ಯರು ಕೇಂದ್ರ ಸ್ಥಾನದಲ್ಲಿರಬೇಕು. ನಕಲಿ ವೈದ್ಯರ ವಿರುದ್ಧ ಕ್ರಮ ಆಗಬೇಕು. ಜಿಲ್ಲಾ, ತಾಲೂಕು ಆಸ್ಪತ್ರೆಗಳಲ್ಲಿ ಆ್ಯಂಬುಲೆನ್ಸ್​ ಇರುವ ಬಗ್ಗೆ ಖಾತ್ರಿಪಡಿಸಿಕೊಳ್ಳಿ. ಅಂಗನವಾಡಿಗಳಲ್ಲಿ ಸ್ವಚ್ಛತೆ ಕಾಪಾಡಿ. ಮಕ್ಕಳಿಗೆ ಗುಣಮಟ್ಟದ ಆಹಾರ ನೀಡಿ. ಶಿಥಿಲ ಶಾಲಾ ಕಟ್ಟಡ, ಸರ್ಕಾರಿ ಭೂಮಿ ಅತಿಕ್ರಮಣದ ವಿವರ ಸಲ್ಲಿಸುವಂತೆ ಸೂಚಿಸಿದರು.

ಆಹಾರ ಸುರಕ್ಷತಾ ಅಧಿಕಾರಿಗಳು ಹೋಟೆಲ್​ ಮತ್ತು ರಸ್ತೆ ಪಕ್ಕದಲ್ಲಿ ಅಂಗಡಿಗಳ ಮೇಲೆ ನಿಗಾವಹಿಸಿ. ಆಹಾರ ಪರಿಶೀಲಿಸಿ. ಗುಣಮಟ್ಟ ಕಾಯ್ದುಕೊಳ್ಳುವ ಬಗ್ಗೆ ಖಚಿತಪಡಿಸಿಕೊಳ್ಳಿ. ಗ್ರಾಪಂನಲ್ಲಿ ಬೋರ್​ವೆಲ್​ ರಿಪೇರಿ ಹೆಸರಿನಲ್ಲಿ ಅಧಿಕಾರಿಗಳು, ಜನಪ್ರತಿನಿಧಿಗಳು ಭಾಗಿಯಾಗಿ ಹಣ ಲಪಟಾಯಿಸುತ್ತಾರೆ. ಈ ಬಗ್ಗೆ ಜಿಪಂ ಸಿಇಒ ಮಾಹಿತಿ ಪಡೆಯಿರಿ ಎಂದು ಸೂಚಿಸಿದರು.

ಅರಣ್ಯ ಭೂಮಿ ಒತ್ತುವರಿ ಎಷ್ಟಾಗಿದೆ ? ್ಯಾಕ್ಟರ್​, ಕಲ್ಲು ಕ್ವಾರಿ ಎಷ್ಟಿವೆ ? ಅಕ್ರಮ&ಸಕ್ರಮಗಳೆಷ್ಟು ?ಎಂಬ ಮಾಹಿತಿ ಸಲ್ಲಿಸಿ. ಯೋಜನೆ ಕೋರಿ ಅರ್ಜಿ ಸಲ್ಲಿಸಿದವರಿಗೆ ನೀಡುವುದಿಲ್ಲ. ಬೆಳೆ ಹಾನಿಯಾದವರಿಗೂ ಪರಿಹಾರ ಬರುವುದಿಲ್ಲ. ಆದರೆ, ಪಕ್ಕದ ಹೊಲದವರಿಗೆ ಬಂದಿರುತ್ತದೆ ಅದು ಹೇಗೆಂದು ಎಂದು ಕೃಷಿ ಅಧಿಕಾರಿಗಳಿಗೆ ಪ್ರಶ್ನಿಸಿದರು.

ಡಿಸಿ ಡಾ.ಸುರೇಶ ಬಿ.ಇಟ್ನಾಳ ಮಾತನಾಡಿ, ಲೋಕಾಯುಕ್ತದಲ್ಲಿ ದಾಖಲಾದ 105 ಪ್ರಕರಣಗಳನ್ನು ಮುಗಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಲಾಗುವುದು. ನಾವೂ ಕಟ್ಟುನಿಟ್ಟಾಗಿ ಕೆಲಸ ಮಾಡುತ್ತೇವೆ. ಅ.29ರಿಂದ 31ವರೆಗೆ ತಾವು ಜಿಲ್ಲೆಗೆ ಆಗಮಿಸುವ ಬಗ್ಗೆ ಜನರಿಗೆ ಮಾಹಿತಿ ನೀಡಲಾಗುವುದು. ಜನರು ಪ್ರಯೋಜನ ಪಡೆಯುವಂತೆ ತಿಳಿಸಲಾಗುವುದೆಂದರು.

ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ಅಪರ ಜಿಲ್ಲಾಧಿಕಾರಿ ಸಿದ್ರಾಮೇಶ್ವರ, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಜಂಟಿ ಕೃಷಿ ನಿರ್ದೇಶಕ ಟಿ.ಎಸ್​.ರುದ್ರೇಶಪ್ಪ, ಸಮಾಜ ಕಲ್ಯಾಣಾಧಿಕಾರಿ ಅಜ್ಜಪ್ಪ ಸೊಗಲದ ಇತರರಿದ್ದರು.

ಕಾರ್ಮಿಕರಿಗೆ ಸೌಲಭ್ಯ ತಲುಪಿವೆಯಾ ?

ಕಾರ್ಮಿಕ ಇಲಾಖೆಯಲ್ಲಿ ಎಷ್ಟು ಮಂದಿ ಅರ್ಹರ ನೋಂದಣಿಯಾಗಿದೆ, ಕಾರ್ಡ್​ ಪಡೆದಿದ್ದಾರಾ ? ಇಎಸ್​ಐ&ಪಿಎ್​ ಸೌಲಭ್ಯ ಪಡೆದ ಬಗ್ಗೆ ಖಚಿತಪಡಿಸಿಕೊಳ್ಳಿ. ಜೀವ, ಅಪಘಾತ ವಿಮೆ ಮಾಡಿಸಿ. ಎಪಿಎಂಸಿ ಹಮಾಲರಿಗೂ ವಿಮೆ ಮಾಡಿಸಬೇಕು ಎಂದು ಉಪ ಲೋಕಾಯುಕ್ತರು ಕಾರ್ಮಿಕ ಅಧಿಕಾರಿಗಳಿಗೆ ತಿಳಿಸಿದರು. ಪೊಲೀಸರು ಸಿವಿಲ್​ ಪ್ರಕರಣಗಳಲ್ಲಿ ಭಾಗಿಯಾಗುತ್ತಾರೆ. ಭಾಗಿಯಾಗದಂತೆ ಎಸ್ಪಿ ನಿರ್ದೇಶನ ನೀಡಬೇಕು. ಲೋಕಾಯುಕ್ತ ಪ್ರಕರಣ ಸಂಬಂಧ ಜಿಲ್ಲಾಧಿಕಾರಿ, ಜಿಪಂ ಸಿಇಒ ಹಾಗೂ ಎಸ್ಪಿ ಎಲ್ಲ ಅಧಿಕಾರಿಗಳಿಗೆ ಮಾಹಿತಿ ನೀಡಿ. ಕರೆಸಿ ಪ್ರಕರಣ ವಿಲೇವಾರಿ ಆಗುವಂತೆ ಕ್ರಮವಹಿಸಿ. ಜಿಲ್ಲೆಯಲ್ಲಿ ಯಾವುದೇ ಪ್ರಕರಣ ಬಾಕಿ ಉಳಿಯದಂತೆ ನೋಡಿಕೊಳ್ಳುವಂತೆ ನಿರ್ದೇಶಿಸಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net