

ಕೊಪ್ಪಳ: ಭ್ರಷ್ಟಾಚಾರ ನಿಮೂರ್ಲನೆಯಲ್ಲಿ ವಿದ್ಯಾರ್ಥಿಗಳ ಪಾತ್ರ ಪ್ರಮುಖ. ನಿಮ್ಮ ಗಮನಕ್ಕೆ ಬರುವ ವಿಷಯಗಳ ಬಗ್ಗೆ ತಕ್ಷಣ ಲೋಕಾಯುಕ್ತಕ್ಕೆ ಮಾಹಿತಿ ನೀಡಿ ಎಂದು ಲೋಕಾಯುಕ್ತ ಪ್ರಭಾರ ಡಿವೈಎಸ್ಪಿ ಚಂದ್ರಪ್ಪ ಇ.ಟಿ.ತಿಳಿಸಿದರು.
ನಗರದ ಸರ್ಕಾರಿ ಮಹಿಳಾ ಪ್ರಥಮ ದರ್ಜೆ ಕಾಲೇಜಿನಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಭ್ರಷ್ಟಾಚಾರ ನಿಗ್ರಹ ಜಾಗೃತಿ ಅರಿವು ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
1984ರಲ್ಲಿ ಕರ್ನಾಟಕ ಲೋಕಾಯುಕ್ತ ಹುಟ್ಟಿದೆ. ಭ್ರಷ್ಟಾಚಾರ ನಿಗ್ರಹ ನಮ್ಮ ಮೂಲ ಉದ್ದೇಶ. ನಾವೆಲ್ಲರೂ ಸೇರಿ ಭ್ರಷ್ಟಾಚಾರ ತಡೆಯಬೇಕು. ಸರ್ಕಾರಿ ನೌಕರರು ಕೆಲಸ ನಿರ್ವಹಿಸಲು ಲಂಚಕ್ಕೆ ಬೇಡಿಕೆ ಇಟ್ಟಿಲ್ಲಿ ನಮಗೆ ಮಾಹಿತಿ ನೀಡಿ. ಸಮಾಜಕ್ಕೆ ಅಂಟಿದ ಭ್ರಷ್ಟಾಚಾರ ಪಿಡುಗು ನಿವಾರಿಸಲು ಸಹಕರಿಸಿ ಎಂದು ಮನವಿ ಮಾಡಿದರು.
ಪಿಐ ಶೈಲಜಾ ಪ್ಯಾಟಿಶೆಟ್ಟರ್ ಮಾತನಾಡಿ, ಎಲ್ಲ ಸರ್ಕಾರಿ ನೌಕರರು ಪ್ರಾಮಾಣಿಕವಾಗಿ ಸರ್ಕಾರಿ ಕೆಲಸ ಮಾಡಬೇಕು. ರೈತರು, ಸಾರ್ವಜನಿಕರ ಹತ್ತಿರ ಸರ್ಕಾರಿ ಸೇವೆ ನೀಡಲು ಲಂಚ ಪಡೆಯಬಾರದು. ಇದರಿಂದ ದೇಶದ ಅಭಿವೃದ್ಧಿಗೆ ತೊಡಕಾಗಲಿದೆ. ಸಾರ್ವಜನಿಕರು ಸಹಕರಿಸಿದಲ್ಲಿ ಭ್ರಷ್ಟಾಚಾರ ನಿಯಂತ್ರಿಸಬಹುದು ಎಂದು ಅಭಿಪ್ರಾಯಪಟ್ಟರು.
ಕಾಲೇಜು ಪ್ರಾಚಾರ್ಯ ಡಾ.ಗಣಪತಿ ಲಮಾಣಿ ಮಾತನಾಡಿದರು. ಅಧಿಕಾರಿಗಳು ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ಭ್ರಷ್ಟಾಚಾರ ನಿಮೂರ್ಲನಾ ಪ್ರತಿಜ್ಞಾ ವಿಧಿ ಬೋಧಿಸಲಾಯಿತು. ಉಪನ್ಯಾಸಕರಾದ ಡಾ.ಹುಲಿಗೆಮ್ಮ ಬಿ, ಡಾ.ಪ್ರದಿಪ್ ಕುಮಾರ್, ಡಾ. ನರಸಿಂಹ, ಅತಿಥಿ ಉಪನ್ಯಾಸಕರಾದ ಶಿವ ಪ್ರಸಾದ್ ಹಾದಿಮನಿ, ಡಾ.ಮಂಜಪ್ಪ, ಡಾ.ಸೂರಪ್ಪ ಇತರರಿದ್ದರು.