ಮತ ಎಣಿಕೆ ವೇಳೆ ನಿಯಮ ಪಾಲಿಸಿ, ಡಿಸಿ ನಲಿನ್​ ಅತುಲ್​ ಸೂಚನೆ

lokasabha election training dc naleen athul koppal
ಕೊಪ್ಪಳದಲ್ಲಿ ಮಂಗಳವಾರ ಮತ ಎಣಿಕೆ ಸಿಬ್ಬಂದಿಗೆ ತರಬೇತಿ ನೀಡಲಾಯಿತು.
Published on

ಕೊಪ್ಪಳ: ಲೋಕಸಭೆ ಚುನಾವಣೆ ಮತ ಎಣಿಕೆ ಜೂನ್​ 4ಕ್ಕೆ ನಡೆಯಲಿದೆ. ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಯಾವುದೇ ಗೊಂದಲಕ್ಕೆ ಅವಕಾಶವಿಲ್ಲದಂತೆ ನಿಯಮಾನುಸಾರ ಕೆಲಸ ನಿರ್ವಹಿಸಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ಹೇಳಿದರು.

ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್​ನಲ್ಲಿ ಮತ ಎಣಿಕೆ ಮೇಲ್ವಿಚಾರಕರು, ಎಣಿಕೆ ಸಹಾಯಕ ಅಧಿಕಾರಿಗಳಿಗೆ ಮಂಗಳವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಕ್ರಮದಲ್ಲಿ ಮಾತನಾಡಿದರು.

ಗವಿಸಿದ್ದೇಶ್ವರ ಕಲಾ, ವಾಣಿಜ್ಯ ಮತ್ತು ವಿಜ್ಞಾನ ಮಹಾವಿದ್ಯಾಲಯದಲ್ಲಿ ನಡೆಸಲಾಗುವುದು. ಮತ ಎಣಿಕೆ ವೇಳೆ ಆಯೋಗ ನೀಡಿರುವ ಮಾರ್ಗಸೂಚಿ ಕಟ್ಟುನಿಟ್ಟಾಗಿ ಪಾಲಿಸಿ. ಸುಗಮವಾಗಿ ನಡೆಸಿ. ಎಣಿಕೆ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಅಂದು ಬೆಳಗ್ಗೆ 6 ಗಂಟೆಗೆ ಕರ್ತವ್ಯಕ್ಕೆ ಹಾಜರಾಗಬೇಕು. 6.30ಕ್ಕೆ ವರದಿ ಮಾಡಿಕೊಳ್ಳಿ. ನಿಮಗೆ ಹಂಚಿಕೆಯಾದ ವಿಧಾನಸಭಾ ಕ್ಷೇತ್ರ, ಟೇಬಲ್​ ಸಂಖ್ಯೆ ಮಾಹಿತಿ ಪಡೆದುಕೊಳ್ಳಿ. ಮತಯಂತ್ರ ಪ್ರಕಾರ ದಾಖಲಾದ ಮತಗಳ ಸಂಖ್ಯೆ, ಚಲಾವಣೆಯಾದ ಮತ ಇತ್ಯಾದಿ ವಿವರ ಕರಾರುವಕ್ಕಾಗಿ ಪಡೆದುಕೊಳ್ಳಿ ಎಂದು ಸೂಚಿಸಿದರು.

ಉಪವಿಭಾಗಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಮಾತನಾಡಿ, ಅಂಚೆ ಮತಪತ್ರ- ಎಣಿಕೆ ಸಿಬ್ಬಂದಿ ಮುಕ್ತವಾಗಿ ಮತ್ತು ನ್ಯಾಯಸಮ್ಮತವಾಗಿ ಕಾರ್ಯನಿರ್ವಹಿಸಿ. ಇವಿಎಂ ಮತ ಎಣಿಕೆ ಮಾಡುವ ಮೊದಲು ಅಂಚೆ ಮತಗಳ ಎಣಿಕೆ ಮಾಡಿ. ಅಂಚೆ ಮತಗಳ ಎಣಿಕೆಗೆ ಪ್ರತಿ ಟೇಬಲ್​ನಲ್ಲಿ ಒಬ್ಬರು ಎಆರ್​ಒ, ಒಬ್ಬರು ಎಣಿಕೆ ಮೇಲ್ವಿಚಾರಕರು ಮತ್ತು ಇಬ್ಬರು ಎಣಿಕೆ ಸಹಾಯಕರು ಇರುತ್ತಾರೆ. ಎಣಿಕೆ ಕಾರ್ಯವನ್ನು ವೀಡಿಯೊಗ್ರಾಫ್​ ಮಾಡಲಾಗುತ್ತದೆ. ಫಾಮ್​ರ್ 13ಎ ಮತ್ತು 13ಬಿ ಅನ್ನು ಸೂಕ್ಷ$್ಮವಾಗಿ ಪರಿಶೀಲಿಸಿದ ನಂತರ ಒಳ ಕವರ್​ ತೆರೆಯಬೇಕು. ಯಾವ ಸಂದರ್ಭದಲ್ಲಿ ಅಂಚೆ ಮತ ಪತ್ರವನ್ನು ತಿರಸ್ಕರಿಸಬೇಕು ಹಾಗೂ ತಿರಸ್ಕರಿಸಬಾರದು ಎಂಬ ನಿಯಮಾವಳಿ ಗಮನಿಸಿ. ಪ್ರತಿ ಅಭ್ಯರ್ಥಿ ಪಡೆದ 25 ಮತಗಳ ಒಂದು ಬಂಡಲ್​ ಮಾಡಿ. ಅಭ್ಯರ್ಥಿ ಪಡೆದ ಒಟ್ಟು ಅಂಚೆ ಮತಗಳ ಸಂಖ್ಯೆ ಲೆಕ್ಕಾಚಾರ ಮಾಡಿ ನಮೂನೆ 20 ರಲ್ಲಿ ಫಲಿತಾಂಶ ನಮೂದಿಸಿ ಎಂದರು.

ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಸೆಕ್ಟರ್​ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳಿಗೆ ತರಬೇತಿ ನೀಡಿದರು. ಎಡಿಸಿ ಸಾವಿತ್ರಿ ಕಡಿ, ವಿಧಾನಸಭಾ ಕ್ಷೇತ್ರದ ಸಹಾಯಕ ಚುನಾವಣಾಧಿಕಾರಿಗಳು, ತಹಸೀಲ್ದಾರ್​ಗಳು, ಸೆಕ್ಟರ್​ ಅಧಿಕಾರಿಗಳು, ಮತ ಎಣಿಕೆ ಮೇಲ್ವಿಚಾರಕರು ಹಾಗೂ ಮತ ಎಣಿಕೆ ಸಹಾಯಕ ಅಧಿಕಾರಿಗಳು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net