

ಕೊಪ್ಪಳ: ಲೋಕಸಭೆ ಚುನಾವಣೆ ಅಂಗವಾಗಿ ಜೂ.4ರಂದು ಗವಿಸಿದ್ದೇಶ್ವರ ಕಾಲೇಜಿಲ್ಲಿ ಮತ ಎಣಿಕೆ ನಡೆಯಲಿದೆ. ಎಣಿಕೆಗೆ 450 ಸಿಬ್ಬಂದಿ ನಿಯೋಜಿಸಿದ್ದು, ಅಗತ್ಯ ಸಿದ್ಧತೆ ಮಾಡಿಕೊಂಡಿರುವುದಾಗಿ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ಬೆಳಗ್ಗೆ 8 ಗಂಟೆಗೆ ಸರಿಯಾಗಿ ಮತ ಎಣಿಕೆ ಆರಂಭವಾಗಲಿದೆ. 9 ಭದ್ರತಾ ಕೊಠಡಿಗಳಲ್ಲಿ ಇವಿಎಂಗಳನ್ನು ಶೇಖರಿಸಲಾಗಿದೆ. ಅಂಚೆ ಮತ ಪತ್ರ ಎಣಿಕೆಗೆ ಪ್ರತ್ಯೇಕ ಕೊಠಡಿ ಇದೆ. ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಒಂದೊಂದು ಕೊಠಡಿ ಕಾಯ್ದರಿಸಲಾಗಿದೆ. ವಿದ್ಯುನ್ಮಾನ ಮತ ಎಣಿಕೆಗೆ ಪ್ರತಿ ಕೊಠಡಿಯಲ್ಲಿ 14 ಟೇಬಲ್, ಒಂದು ಸಹಾಯಕ ಚುನಾವಣಾಧಿಕಾರಿ ಟೆಬಲ್ ಇರಲಿದೆ. ಅಂಚೆ ಮತ ಪತ್ರ ಎಣಿಕೆಗೆ 8 ಟೇಬಲ್, ಇಟಿಪಿಬಿಎಂಎಸ್ ಮೂಲಕ ಸ್ವೀಕೃತವಾದ ಮತ ಪತ್ರ ಎಣಿಕೆಗೆ 1ಟೇಬಲ್ ಕಾಯ್ದಿರಿಸಲಾಗಿದೆ ಎಂದು ಭಾನುವಾರ ಸುದ್ದಿಗೋಷ್ಠಿಯಲ್ಲಿ ವಿವರಿಸಿದರು.
ಪ್ರತಿ ಸುತ್ತಿನಲ್ಲಿ 14 ಮತಗಟ್ಟೆ ಎಣಿಕೆ ನಡೆಯಲಿದೆ. ವಿಧಾನಸಭಾ ಕ್ಷೇತ್ರವಾರು ಸುತ್ತಗಳನ್ನು ನಿಗದಿಪಡಿಸಲಾಗಿದೆ. ಸಿಂಧನೂರು ಕ್ಷೇತ್ರದಲ್ಲಿ 269 ಮತಟ್ಟೆಗಳಿದ್ದು, 20 ಸುತ್ತು, ಮಸ್ಕಿ 231 ಮತಗಟ್ಟೆ, 17 ಸುತ್ತು, ಕುಷ್ಟಗಿ 268 ಮತಗಟ್ಟೆ 20 ಸುತ್ತು, ಕನಕಗಿರಿ 266 ಮತಗಟ್ಟೆ 19 ಸುತ್ತು, ಗಂಗಾವತಿ 235 ಮತಗಟ್ಟೆ 17 ಸುತ್ತು, ಯಲಬುರ್ಗಾ 256 ಮತಗಟ್ಟೆ 19 ಸುತ್ತು, ಕೊಪ್ಪಳ 292 ಮತಗಟ್ಟೆ 21 ಸುತ್ತು, ಸಿರಗುಪ್ಪ 228 ಮತಟ್ಟೆ, 17 ಸುತ್ತಿನಲ್ಲಿ ಎಣಿಕೆ ನಡೆಯಲಿದೆ. ಪ್ರತಿ ಕ್ಷೇತ್ರಕ್ಕೆ 17 ಎಣಿಕೆ ಮೇಲ್ವಿಚಾರಕರು, 17 ಎಣಿಕೆ ಸಹಾಯಕರು ಹಾಗೂ 17 ಮೈಕೋಆಬ್ಸರ್ವರ್ ಇರುವರು. ಅಂಚೆ ಮತಪತ್ರ ಎಣಿಕೆಗೆ 11 ಎಣಿಕೆ ಮೇಲ್ವಿಚಾರಕರು, 21 ಎಣಿಕೆ ಸಹಾಯಕರು ಹಾಗೂ 10 ಮೈಕೋಆಬ್ಸರ್ವರ್ ಒಟ್ಟು 147 ಎಣಿಕೆ ಮೇಲ್ವಿಚಾರಕರು, 157 ಎಣಿಕೆ ಸಹಾಯಕರು ಮತ್ತು 146 ಮೈಕೋಆಬ್ಸರ್ವರ್ಗಳನ್ನು ನೇಮಿಸಲಾಗಿದೆ. ಅಭ್ಯರ್ಥಿಗಳು ಪ್ರತಿ ಟೇಬಲ್ಗೆ ಒಬ್ಬರಂತೆ 129 ಎಣಿಕೆ ಏಜೆಂಟ್ಗಳನ್ನು ನೇಮಿಸಲು ಅವಕಾಶವಿದೆ ಎಂದರು.
ಪ್ರತಿ ಸುತ್ತಿನ ಎಣಿಕೆ ಮುಗಿದ ನಂತರ ಘೋಷಣೆ ಮಾಡಲಾಗುವುದು. ಎಣಿಕೆ ಕೇಂದ್ರದ ಎದುರಿನ ಮೈದಾನದಲ್ಲಿ ಸ್ಕ್ರೀನ್ ಮೂಲಕ ಲಿತಾಂಶ ತೋರಿಸಲಾಗುವುದು. ಜೂ.3ರ ಸಂಜೆ 6 ಗಂಟೆಯಿಂದ ಜೂ.4ರ ಮಧ್ಯರಾತ್ರಿವರೆಗೆ ಜಿಲ್ಲಾದ್ಯಂತ ನಿಷೇಧಾಜ್ಞೆ ಇರಲಿದೆ. ಜೂ.4ರ ಬೆಳಗ್ಗೆ 6ರಿಂದ ಮಧ್ಯರಾತ್ರಿವರೆಗೆ ಶುಷ್ಕ ದಿನ ಘೋಷಿಸಿದ್ದು, ಮದ್ಯ ತಯಾರಿಕೆ, ಮಾರಾಟ, ಸಾಗಣೆ, ಸಂಗ್ರಹಣೆ ನಿಷೇಧವಿರಲಿದೆ. ಜಿಲ್ಲಾದ್ಯಂತ ವಿಜಯೋತ್ಸವ ಆಚರಣೆ, ಮೆರವಣಿಗೆ, ಪಟಾಕಿ ಸಿಡಿಸುವಿಕೆ ರ್ನಿಬಂಧಿಸಲಾಗಿದೆ ಎಂದು ಮಾಹಿತಿ ನೀಡಿದರು.
ಎಸ್ಪಿ ಯಶೋದಾ ವಂಟಗೋಡಿ ಮಾತನಾಡಿ, ಮತ ಎಣಿಕೆ ಕೇಂದ್ರ ರ್ನಿಬಂಧಿತ ಪ್ರದೇಶವಾಗಿರಲಿದೆ. ಕೇಂದ್ರ ಸಂಪರ್ಕಿಸುವ ರಸ್ತೆಗಳಲ್ಲಿ ವಾಹನ ಸಂಚಾರ ನಿಷೇಧಿಸಲಾಗಿದೆ. ಕೇಂದ್ರಕ್ಕೆ ಬರುವವರು ಬಸವೇಶ್ವರ ವೃತ್ತ ಮಾರ್ಗವಾಗಿಯೇ ಬರಬೇಕು. ತಮಗೆ ನಿಗದಿಪಡಿಸಿದ ಸ್ಥಳದಲ್ಲಿ ವಾಹನ ನಿಲ್ಲಿಸಬೇಕು. ರಾಜಕೀಯ ಪಕ್ಷಗಳ ಏಜೆಂಟ್, ಸಾರ್ವಜನಿಕರಿಗೆ ಎಪಿಎಂಸಿ ಆವರಣದಲ್ಲಿ, ಮತ ಎಣಿಕೆ ಅಧಿಕಾರಿ, ಸಿಬ್ಬಂದಿ, ಮಾಧ್ಯಮದವರಿಗೆ ಬಿಬಿಎಂ ಕಾಲೇಜು ಆವರಣದಲ್ಲಿ ಪಾರ್ಕಿಂಗ್ ರಚಿಸಲಾಗಿದೆ. ಗವಿಮಠಕ್ಕೆ ತೆರಳುವವರು ಬಸವೇಶ್ವರ ವೃತ್ತದಿಂದ ಗವಿಶ್ರೀ ನಗರದ 3ನೇ ಕ್ರಾಸ್ ಮೂಲಕ ಕೇತೇಶ್ವರ ಕಲ್ಯಾಣ ಮಂಟಪವರೆಗೆ ತೆರಳಿ ವಾಹನ ಪಾರ್ಕ್ ಮಾಡಿ ಮಠಕ್ಕೆ ತೆರಳಬಹುದು ಎಂದರು.
ಗಡಿಯಾರ ಕಂಬ ವೃತ್ತದಿಂದ ಬರುವವರು ಜೈಲು ರಸ್ತೆಯಲ್ಲಿ ವಾಹನ ನಿಲ್ಲಿಸಿ ನಡೆದು ಮಠಕ್ಕೆ ಹೋಗಬಹುದು. ಮತ ಎಣಿಕೆ ಕೇಂದ್ರಕ್ಕೆ ಪ್ರವೇಶ ಪಡೆಯುವವರು ಕಡ್ಡಾಯವಾಗಿ ಪಾಸ್ ಹೊಂದಿರಬೇಕು. ಭಾರಿ ವಾಹನಗಳು ಗವಿಮರ ರಸ್ತೆ ಮೂಲಕ ಹಿರೇಸಿಂದೋಗಿ ಕಡೆಗೆ ತೆರಳುವ ಹಾಗೂ ಹಿರೇಸಿಂದೋಗಿಯಿಂದ ಗವಿಮಠ ರಸ್ತೆ ಕಡೆಗೆ ಸಂಚರಿಸುವ, ಹಾಲವರ್ತಿಯಿಂದ ಗವಿಮಠ ಮೂಲಕ ಸಂಚರಿಸುವ ಹಾಗೂ ಬಸವೇಶ್ವರ ವೃತ್ತದಿಂದ ಹಾಲವರ್ತಿ ಕಡೆಗೆ ಬಾರಿ ವಾಹನಗಳು ಬೈಪಾಸ್ ರಸ್ತೆ ಮೂಲಕ ಸಂಚರಿಸಬೇಕು. ಲು ವಾಹನಗಳು ಗಡಿಯಾರ ಕಂಬ, ಅಶೋಕ ವೃತ್ತ, ಹಳೇ ಡಿಸಿ ಕಚೇರಿ ವೃತ್ತ ಮೂಲಕ ಸಂಚರಿಸಬೇಕು ಎಂದು ತಿಳಿಸಿದರು.
ಎಡಿಸಿ ಸಾವಿತ್ರಿ ಕಡಿ, ಚುನಾವಣಾ ವಿಭಾಗದ ಸಿಬ್ಬಂದಿ ಇದ್ದರು.
ಅಗತ್ಯ ಭದ್ರತಾ ಸಿಬ್ಬಂದಿ ನಿಯೋಜನೆ
ಬಂದೋಬಸ್ತ್ ಕರ್ತವ್ಯಕ್ಕೆ ಒಬ್ಬ ಎಎಸ್ಪಿ, 2 ಡಿಎಸ್ಪಿ, 7 ಸಿಪಿಐ/ಪಿಐ, 21 ಪಿ.ಎಸ್.ಐ, 33 ಎ.ಎಸ್.ಐ., 100 ಹೆಡ್ ಕಾನ್ಸ್ಟೇಬಲ್, 125 ಪೊಲೀಸ್ ಕಾನ್ಸ್ಟೇಬಲ್, 24 ಮಹಿಳಾ ಹೆಡ್ ಕಾನ್ಸ್ಟೇಬಲ್, 2 ಡಿ.ಎ.ಆರ್., 2 ಕೆ.ಎಸ್.ಆರ್.ಪಿ., 50 ಗೃಹರಕ್ಷಕ ದಳ ಸಿಬ್ಬಂದಿ ನೇಮಿಸಲಾಗಿದೆ. ಜಿಲ್ಲೆಯ ಇತರ ಸ್ಥಳಗಳಲ್ಲಿ ಬಂದೋಬಸ್ತ್ ಕರ್ತವ್ಯಕ್ಕಾಗಿ 7 ಸಿಪಿಐ/ಪಿಐ, 18 ಪಿ.ಎಸ್.ಐ, 37 ಎ.ಎಸ್.ಐ., 125 ಹೆಡ್ ಕಾನ್ಸ್ಟೇಬಲ್, 200 ಪೊಲೀಸ್ ಕಾನ್ಸ್ಟೇಬಲ್, 30 ಮಹಿಳಾ ಹೆಡ್ ಕಾನ್ಸ್ಟೇಬಲ್, 6 ಡಿ.ಎ.ಆರ್., 2 ಕೆ.ಎಸ್.ಆರ್.ಪಿ., 150 ಗೃಹರಕ್ಷಕ ದಳ ಸಿಬ್ಬಂದಿ ಇರಲಿದ್ದಾರೆ ಎಂದು ಎಸ್ಪಿ ವಿವರಿಸಿದರು.