

ಕೊಪ್ಪಳ: ಲಯನ್ಸ್ ಕ್ಲಬ್ ಹಲವು ಸಾಮಾಜಿಕ ಸೇವೆ ನೀಡುತ್ತಿದ್ದು, ಕೊಪ್ಪಳದಲ್ಲಿ ಡೇ ಕೇರ್ ಸೆಂಟರ್ ಆರಂಭಿಸಿದ್ದು ಸಾರ್ವಜನಿಕರು ಸದ್ಬಳಕೆ ಮಾಡಿಕೊಳ್ಳಬೇಕೆಂದು ಲಯನ್ಸ್ ಕ್ಲಬ್ ಡಿಸ್ಟ್ರಿಕ್ಟ್ ಗವರ್ನರ್ ಮನೋಜ್ ಎಲ್. ಮಾನೆಕ್ ಹೇಳಿದರು.
ನಗರದಲ್ಲಿ ಲಯನ್ಸ್ ಕ್ಲಬ್ ಹಾಗೂ ಮಲ್ಲಿಕಾರ್ಜುನ್ ಸೋಮಲಾಪುರ ಮೆಮೋರಿಯಲ್ ಟೆಸ್ಟ್ ಸಹಯೋಗದಲ್ಲಿ ಆರಂಭಿಸಿರುವ ಡೇ ಕೇರ್ ಸೆಂಟರ್ ಶುಕ್ರವಾರ ಉದ್ಘಾಟಿಸಿ ಮಾತನಾಡಿದರು.
ಇತ್ತೀಚೆಗೆ ಎಲ್ಲ ವಯೋಮಾನದವರಿಗೆ ಆರೋಗ್ಯ ಸಮಸ್ಯೆ ಬಾಧಿಸುತ್ತಿವೆ. ಜನರ ಆರೋಗ್ಯ ರಕ್ಷಣೆಗಾಗಿ ಕ್ಲಬ್ ಅನೇಕ ಚಟುವಟಿಕೆಗಳನ್ನು ಹಮ್ಮಿಕೊಳ್ಳುತ್ತಿದೆ. ಕೊಪ್ಪಳದಲ್ಲಿ ಡೇ ಕೇರ್ ಸೆಂಟರ್ ಆರಂಭಿಸಲಾಗಿದೆ. ಅತಿ ಕಡಿಮೆ ದರದಲ್ಲಿ ಸೇವೆಗಳು ಸಿಗಲಿವೆ. ಇದರಿಂದ ಬಡವರಿಗೆ ಅನುಕೂಲವಾಗಲಿದೆ ಎಂದರು.
ಕ್ಲಬ್ ಕಾರ್ಯದರ್ಶಿ ಪ್ರದಿಪ್ ಸೋಮಲಾಪುರ ಮಾತನಾಡಿ, ಕೊಪ್ಪಳದ ಜನರಿಗೆ ಆರೋಗ್ಯದ ಸಮಸ್ಯೆಗಳ ಕುರಿತಂತೆ ಲಯನ್ಸ್ ಕ್ಲಬ್ ಡೇ ಕೇರ್ ಸೆಂಟರ್ ಕಾಳಜಿ ವಹಿಸಲಿದೆ. ಸಾರ್ವಜನಿಕರು ಆರೋಗ್ಯದ ಮೇಲೆ ಹೆಚ್ಚು ಹಣ ವ್ಯಯಿಸುತ್ತಿದ್ದಾರೆ. ಸೂಕ್ತ ಮಾರ್ಗದರ್ಶನ, ಸಕಾಲಕ್ಕೆ ಚಿಕಿತ್ಸೆ ಸಿಗದೆ ಹಲವರು ಪ್ರಾಣ ಕಳೆದುಕೊಳ್ಳುತ್ತಿದ್ದಾರೆ. ಇದನ್ನು ಅರಿತು ಮಲ್ಲಿಕಾರ್ಜುನ್ ಸೋಮಲಾಪುರ ಮೆಮೋರಿಯಲ್ ಟ್ರಸ್ಟ್ ಡೇ ಕೇರ್ ಸೆಂಟರ್ ಆರಂಭಿಸಿದ್ದೇವೆ. ಸಾರ್ವಜನಿಕರಿಗೆ ಇಲ್ಲಿ ಉತ್ತಮ ಸೌಲಭ್ಯ ಸಿಗಲಿದೆ ಎಂದು ಹೇಳಿದರು.
ಕ್ಲಬ್ ಆಡಳಿತ ಮಂಡಳಿ ಸದಸ್ಯ ರವಿ ಎಲ್.ನಾಡಿಗೇರ, ಅಡ್ವೆ$ಸರ್ ಸುಗ್ಗಲಾ ಯಳಮಲಿ, ಪರಮೇಶ್ವರಪ್ಪ ಕೊಪ್ಪಳ, ವೀರಭದ್ರಪ್ಪ ಅಂಗಡಿ ಇತರರಿದ್ದರು.