ಗ್ರಂಥಾಲಯಗಳು ವಿದ್ಯಾರ್ಥಿಗಳನ್ನು ಆಕರ್ಷಿಸುವಂತಿರಲಿ,ಸಿಇಒ ರಾಹುಲ್​ ರತ್ನಂ ಪಾಂಡೆಯ ಸೂಚನೆ

library meetingzp ceo Rahul rantam pandey koppal
ಕೊಪ್ಪಳದಲ್ಲಿ ಗುರುವಾರ ಜಿಪಂನಿಂದ ಹಮ್ಮಿಕೊಂಡಿದ್ದ ಸಭೆಯಲ್ಲಿ ಭಾಗವಹಿಸಿದ್ದ ಗ್ರಾಪಂ ಗ್ರಂಥಾಲಯ ಮೇಲ್ವಿಚಾರಕರು.
Published on

ಕೊಪ್ಪಳ: ಗ್ರಾಪಂ ಗ್ರಂಥಾಲಯ ಹಾಗೂ ಮಾಹಿತಿ ಕೇಂದ್ರ ವಿದ್ಯಾರ್ಥಿಗಳನ್ನು ಆಕರ್ಷಿಸುವಂತಿರಲಿ ಎಂದು ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಗ್ರಾಪಂ ಗ್ರಂಥಾಲ ಮೇಲ್ವಿಚಾರಕರಿಗೆ ಸೂಚಿಸಿದರು.

ನಗರದ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ಗುರುವಾರ ಹಮ್ಮಿಕೊಂಡಿದ್ದ ಗ್ರಂಥಾಲಯ ಮೇಲ್ವಿಚಾರಕರ ಸಭೆಯಲ್ಲಿ ಮಾತನಾಡಿದರು.

ಮೇಲ್ವಿಚಾರಕರಿಗೆ 9 ತಿಂಗಳ ವೇತನ, ತುಟ್ಟಿ ಭತ್ಯೆಯನ್ನು ಗ್ರಾಪಂ ಕರ ವಸೂಲಿಯ ಶೇ.6ರಷ್ಟು ಮೊತ್ತದಲ್ಲಿ ಪಾವತಿಸಿ. ಪಿಡಿಒಗಳು ಶಾಸನಬದ್ಧ ಖಾತೆಗೆ ಹಣ ಜಮಾ ಆದ ಕೂಡಲೇ ಕಾಲ ಕಾಲಕ್ಕೆ ವೇತನ ಪಾವತಿಸಿ. ಗ್ರಂಥಾಲಯಕ್ಕೆ ಸುಸಜ್ಜಿತ ಕಟ್ಟಡ ಕಲ್ಪಿಸಿ. ಗ್ರಂಥಾಲಯ ಮೇಲ್ವಿಚಾರಕರು ಮೊಬೈಲ್​ ಆ್ಯಪ್​ ಆಧಾರಿತ ಹಾಜರಾತಿ ಅಳವಡಿಸಿಕೊಳ್ಳಬೇಕು. ಡಿಜಿ ವಿಕಾಸನ್​ ಶಿಕ್ಷಣ ಫೌಂಡೇಶನ್​ ಹಾಗೂ ಟಾಟಾ ಟ್ರಸ್ಟ್​ನಿಂದ ನಡೆಯುವ ಕಾರ್ಯಚಟುವಟಿಕೆಗಳಲ್ಲಿ ಭಾಗವಹಿಸಿ. ಮಕ್ಕಳನ್ನು ಗ್ರಂಥಾಲಯಕ್ಕೆ ಕಳಿಸುವಂತೆ ಮುಖ್ಯ ಶಿಕ್ಷಕರಿಗೆ ಸೂಚನೆ ನೀಡಲು ಶಿಕ್ಷಣ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.

ಜಿಲ್ಲಾ ಸಂಯೋಜಕ ಬಸವರಾಜ ಬಡಿಗೇರ ಮಾತನಾಡಿ, ಶಿಕ್ಷಣ ಫೌಂಡೇಶನ್​ನಿಂದ ಗ್ರಾಮ ಡಿಜಿ ವಿಕಾಸನ್​ ಯೋಜನೆ ಜಿಲ್ಲೆಯಲ್ಲಿ 65 ಗ್ರಾಪಂ ಗ್ರಂಥಾಲಯಗಳಲ್ಲಿ ಅನುಷ್ಠಾನ ಮಾಡಿದೆ. ಕಾರ್ಯಕ್ರಮಕ್ಕೆ ಡಿಜಿಟಲ್​ ಸಂಪನ್ಮೂಲಗಳನ್ನು ಈಗಾಗಲೇ ನೀಡಿದ್ದೇವೆ. ಎರಡನೆಯ ಹಂತದಲ್ಲಿ 21 ಗ್ರಂಥಾಲಯಗಳಿಗೆ ಮಾನಿಟರ್​, ಸ್ಪೀಕರ್​, ಟಿವಿ ಸ್ಟಿಕ್​, ಮೊಬೈಲ್​ ವಿತರಿಸಲಾಗುವುದು. ಈ ಸಂಪನ್ಮೂಲಗಳಲ್ಲಿ 8, 9, 10, 12 ನೇ ತರಗತಿಗಳ ವಿಡಿಯೋ ಪಾಠಗಳನ್ನು ಹಾಕಲಾಗಿದೆ. ವಿದ್ಯಾರ್ಥಿಗಳ ನಿರಂತರ ಬಳಕೆಯ ಮೂಲಕ ತರಗತಿಯ ವಿಷಯಾಂಶಗಳನ್ನು ಕಲಿಕೆಯ ಪುನಶ್ಚೇತನ ಮಾಡಿಕೊಳ್ಳಬೇಕು. ಡಿಜಿಟಲ್​ ಕೌಶಲಗಳ ಶಿಕ್ಷಣ ಕಲಿಯಲು ಡಿಜಿಟಲ್​ ಸಂಪನ್ಮೂಲಗಳು ಅನುಕೂಲಕರವಾಗಿವೆ ಎಂದರು.

ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆಡಳಿತ ವಿಭಾಗದ ಸಹಾಯಕ ನಿರ್ದೇಶಕ ಶರಣು ಪೂಜಾರ, ಜಿಲ್ಲಾ ಗ್ರಂಥಾಲಯದ ಮುಖ್ಯ ಗ್ರಂಥಪಾಲಕ ಯಮನೂರ, ವ್ಯವಸ್ಥಾಪಕಿ ನಿವೇದಿತಾ ಭಂಡಾರಿ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net