ಅಧಿಕಾರಿಗಳ ವಿರುದ್ಧ ಆಗಲಿ ಕ್ರಮ

district koppal librarian suicied kalaburgi sedam
Published on
ಕೊಪ್ಪಳ : ಕಲಬುರ್ಗಿ ಜಿಲ್ಲೆ ಸೇಡಂ ತಾಲೂಕಿನ ಮಳಖೇಡ ಗ್ರಾಪಂ ಗ್ರಂಥಾಲಯ ಗ್ರಂಥಪಾಲಕಿ ಸಾವಿಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕ್ರಮಕ್ಕೆ ಆಗ್ರಹಿಸಿ ಜಿಲ್ಲಾ ಗ್ರಾಪಂ ಗ್ರಂಥಾಲಯ ಗ್ರಂಥಪಾಲಕರು ಬುಧವಾರ ಜಿಪಂ ಸಿಇಒ ಮೂಲಕ ರಾಜ್ಯ ಸರ್ಕಾರಕ್ಕೆ ಮನವಿ ಸಲ್ಲಿಸಿದರು.
ಗ್ರಾಪಂಗೆ ಒಂದರಂತೆ ಗ್ರಂಥಾಲಯ ಆರಂಭಿಸಲಾಗಿದೆ. ಗ್ರಂಥಪಾಲಕರನ್ನು ನೇಮಿಸಿದ್ದು ಸರಿಯಾಗಿ ವೇತನ ಪಾವತಿಸಿಲ್ಲ. ಗ್ರಾಪಂ ಪಿಡಿಒ ಹಾಗೂ ಅಧ್ಯಕ್ಷಕರು ಕಿರುಕುಳ ನೀಡಿದ್ದಾರೆ. ಎರಡು ದಶಕದಿಂದ ಅರಿವು ಕೇಂದ್ರದ ಪಾಲಕಿಯಾಗಿದ್ದ ಭಾಗ್ಯವತಿ ಅಗ್ಗಿಮಠ ಮನನೊಂದು ಗ್ರಂಥಾಲಯದಲ್ಲೇ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಇದರಿಂದ ಅವರ ಕುಟುಂಬಕ್ಕೆ ಅನ್ಯಾಯವಾಗಿದೆ ಎಂದು ಆರೋಪಿಸಿದರು.
ಕೂಡಲೇ ಗ್ರಂಥಪಾಲಕಿ ಕುಟುಂಬಕ್ಕೆ 50 ಲಕ್ಷ ರೂ. ಪರಿಹಾರ ನೀಡಬೇಕು. ಆತ್ಮಹತ್ಯೆಗೆ ಕಾರಣವಾದ ಅಧಿಕಾರಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಬೇಕು. ಗ್ರಾಪಂ ಮೂಲಕ ವೇತನ ಪಾವತಿ ನಿಲ್ಲಿಸಬೇಕು. ನೇರವಾಗಿ ಜಿಪಂನಿಂದ ಗ್ರಂಥಪಾಲಕರ ಖಾತೆಗೆ ಜಮಾ ಮಾಡಬೇಕು. ಅಧ್ಯಕ್ಷರು, ಪಿಡಿಒ, ಸದಸ್ಯರಿಂದ ಆಗುವ ಕಿರುಕುಳ ತಪ್ಪಿಸಬೇಕು. ವೇತನ ತಾರತಮ್ಯ ಸರಿಪಡಿಸಿ. ಸಾರ್ವಜನಿಕ ಗ್ರಂಥಾಲಯ ಇಲಾಖೆಗೆ ನಮ್ಮನ್ನು ವರ್ಗಾಯಿಸಬೇಕೆಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ಜಗದೀಶ ಛಲವಾದಿ, ಪದಾಧಿಕಾರಿಗಳಾದ ಬಸವರಾಜ ಕಲ್ಲೂರು, ದೇವರಾಜ ಬಡಿಗೇರ, ಪರಸಪ್ಪ ಕಟ್ಟಿಮನಿ, ಶೇಖರಗೌಡ ಮಾಲಿಪಾಟೀಲ್, ನಾಗರಾಜ, ನಿಂಗಪ್ಪ ಗೊಂದಿ, ದೇವರಾಜ ಮ್ಯಾದನೇರಿ ಇತರರಿದ್ದರು.
ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net