ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ಬದ್ಧ, ಸಚಿವ ಸಂತೋಷ ಲಾಡ್​ ಭರವಸೆ

district koppal labour department minister santosh lad smart card
Published on

ಕೊಪ್ಪಳ: ಅಸಂಘಟಿತ ಕಾರ್ಮಿಕರ ಕಲ್ಯಾಣಕ್ಕೆ ನಮ್ಮ ಸರ್ಕಾರ ಬದ್ಧವಾಗಿದೆ. ಅವರ ಕಲ್ಯಾಣಕ್ಕಾಗಿ ಅಸಂಟಿತ ಕಾರ್ಮಿಕರ ಕಲ್ಯಾಣ ಮಂಡಳಿ ರಚಿಸಿದ್ದು ಮೂರು ಹೊಸ ಕಾಯ್ದೆ ಜಾರಿ ಮಾಡಲಾಗಿದೆ ಎಂದು ಕಾರ್ಮಿಕ ಸಚಿವ ಸಂತೋಷ ಲಾಡ್​ ತಿಳಿಸಿದರು.

ನಗರದ ಮಧುಶ್ರೀ ಗಾರ್ಡನ್​ನಲ್ಲಿ ಕಾರ್ಮಿಕ ಇಲಾಖೆಯಿಂದ ಶುಕ್ರವಾರ ಹಮ್ಮಿಕೊಂಡಿದ್ದ ಅಸಂಘಟಿತ ಕಾರ್ಮಿಕರಿಗೆ ಸ್ಮಾರ್ಟ್​ ಕಾರ್ಡ್​ ವಿತರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.

ದೇಶದಲ್ಲಿ ಶೇ.90ರಷ್ಟು, ರಾಜ್ಯದಲ್ಲಿ ಶೇ.83ರಷ್ಟು ಅಸಂಘಟಿತ ಕಾರ್ಮಿಕರಿದ್ದಾರೆ. ಕಟ್ಟಡ ಕಾರ್ಮಿಕರಿಗೆ ನೀಡುವಂತೆ ಸೌಲಭ್ಯ ನೀಡಬೇಕೆಂಬುದು ಕಾರ್ಮಿಕರ ಬೇಡಿಕೆಯಾಗಿತ್ತು. ಆದರೆ, ಕಾನೂನಾತ್ಮಕವಾಗಿ ನೀಡಲು ಬರುವುದಿಲ್ಲ. ಅಸಂಘಟಿತ ಕಾರ್ಮಿಕರಿಗಾಗಿಯೇ ವಿಶೇಷ ಯೋಜನೆ ಜಾರಿ ಮಾಡಿದ್ದೇವೆ. 91 ವಿಭಾಗದ ಕಾರ್ಮಿಕರಿದ್ದಾರೆ. ಇಂಧನ ಸೆಸ್​ ಹೆಚ್ಚಳ ಮಾಡಿದ್ದು, ಅದರಲ್ಲಿ ಶೇ 1-1.50ರಷ್ಟು ಅನುದಾನ ಕಾರ್ಮಿಕ ಇಲಾಖೆಗೆ ನೀಡುವಂತೆ ಸಿಎಂ ಬಳಿ ಮನವಿ ಮಾಡಿರುವೆ. ಇದರಿಂದ 1,200 ಕೋಟಿ ರೂ. ಅನುದಾನ ದೊರೆಯಲಿದೆ. ಅದರಲ್ಲಿಯೇ ನಿಮಗೆಲ್ಲ ವಿಶೇಷ ಯೋಜನೆ ಜಾರಿ ಮಾಡಲು ನೆರವಾಗಲಿದೆ ಎಂದರು.

ನಮ್ಮ ಸರ್ಕಾರ ಗಿಗ್​ ಬಿಲ್​, ಸಿನಿ ಬಿಲ್​, ಟ್ರಾನ್ಸಪೋರ್ಟ್​ ಬಿಲ್​ ಜಾರಿ ಮಾಡಿದೆ. ಇದರಿಂದ ಆಹಾರ ಸರಬರಾಜು ಮಾಡುವವರು, ಸಿನಿ ರಂಗದ ಕಾರ್ಮಿಕರಿಗೆ ಅನುಕೂಲವಾಗಲಿದೆ. ಡಿಸಿ, ಎಸ್ಪಿ ರಸ್ತೆ ಸುರಕ್ಷಾ ನಿಯಮ ಕಡ್ಡಾಯವಾಗಿ ಜಾರಿ ಮಾಡಿ. ನಮ್ಮ ಇಲಾಖೆಯಿಂದ ಯಾವುದೇ ಚಾಲಕರು ಅಪಘಾತದಲ್ಲಿ ಮರಣ ಹೊಂದಿದರೆ ಐದು ಲಕ್ಷ ರೂ. ಪರಿಹಾರ ನೀಡಲಾಗುವುದು. ಗುತ್ತಿಗೆ ನೌಕರರಿಗೆ ಸೊಸೈಟಿ ಮೂಲಕ ನೆರವಾಗಲಾಗುತ್ತಿದೆ. ಬೀದರ್​ನಲ್ಲಿ ಜಾರಿ ಮಾಡಿದ್ದು, ಶ್ರೀ ಎಲ್ಲ ಜಿಲ್ಲೆಗಳಲ್ಲಿ ಜಾರಿ ಮಾಡಲಾಗುವುದು. 4ಜಿ ವಿನಾಯಿತಿ ಕಲ್ಪಿಸುವ ಕೆಲಸ ಬಾಕಿ ಇದೆ. ಮುಂದೆ ಡೊಮ್ಯಾಸ್ಟಿಕ್​ ಬಿಲ್​ ಜಾರಿ ಮಾಡುವ ಯೋಜನೆ ಇದೆ. ಕೈಗಾರಿಕೆಗಳಲ್ಲಿ ಸ್ಥಳಿಯರಿಗೆ ಕೆಲಸ ಸಿಗಬೇಕು. ಎಸ್ಸಿ&ಎಸ್ಟಿ ಕಾರ್ಮಿಕರ ಮಕ್ಕಳ ಕಲ್ಯಾಣಕ್ಕೆ ಉದ್ಯಮಿಗಳಿಂದ ನೆರವು ಪಡೆಯಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ಜಂಟಿ ಕಾರ್ಮಿಕ ಆಯುಕ್ತ ಡಾ.ಎಸ್​.ಬಿ. ರವಿಕುಮಾರ ಪ್ರಾಸ್ತಾವಿಕವಾಗಿ ಮಾತನಾಡಿದರು.

ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶ್ರೀನಿವಾಸ ಗುಪ್ತ, ಗ್ಯಾರಂಟಿ ಯೋಜನೆಗಳ ಅನುಷ್ಠಾನ ಪ್ರಾಧಿಕಾರದ ಜಿಲ್ಲಾಧ್ಯಕ್ಷ ರೆಡ್ಡಿ ಶ್ರೀನಿವಾಸ, ಡಾ.ಬಾಬು ಜಗಜೀವನ ರಾಮ್​ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ಮುಂಡರಗಿ ನಾಗರಾಜ, ಜಿಲ್ಲಾಧಿಕಾರಿ ಡಾ. ಸುರೇಶ ಬಿ. ಇಟ್ನಾಳ, ಜಿಪಂ ಸಿಇಒ ವರ್ಣಿತ್​ ನೇಗಿ, ಎಸ್ಪಿ ಡಾ.ರಾಮ್​ ಎಲ್​.ಅರಸಿದ್ದಿ, ವಿಭಾಗ ಕಾರ್ಮಿಕ ಆಯುಕ್ತ ಡಾ.ವೆಂಕಟೇಶ ಶಿಂದಿಹಟ್ಟಿ, ಸಹಾಯಕ ಆಯುಕ್ತ ಮಹ್ಮದ್​ ಬಶೀರ್​ ಅನ್ಸಾರಿ, ಜಿಲ್ಲಾ ಕಾರ್ಮಿಕ ಅಧಿಕಾರಿ ಸುಧಾ ಗರಗ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net