

ಕೊಪ್ಪಳ: ಕುವೆಂಪು ಕನ್ನಡದ ಅಗ್ರಮಾನ್ಯ ಕವಿ. ಇಂದಿನ ಯುವ ಕವಿಗಳಿಗೆ ಅವರು ಸ್ಫೂರ್ತಿ ಎಂದು ಅಪರ ಜಿಲ್ಲಾಧಿಕಾರಿ ಸಾವಿತ್ರಿ ಕಡಿ ಹೇಳಿದರು.
ನಗರದ ಸಾಹಿತ್ಯ ಭವನದಲ್ಲಿ ಜಿಲ್ಲಾಡಳಿತದಿಂದ ಶುಕ್ರವಾರ ಹಮ್ಮಿಕೊಂಡಿದ್ದ ವಿಶ್ವ ಮಾನವ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
ಕನ್ನಡದ ಸಾಹಿತ್ಯ ಇತಿಹಾಸದಲ್ಲಿ ಅನೇಕ ಮೊದಲುಗಳಿಗೆ ಕುವೆಂಪು ಕಾರಣೀಭೂತರಾಗಿದ್ದಾರೆ. ಆಡು ಮುಟ್ಟದ ಸೊಪ್ಪಿಲ್ಲ. ಅವರು ಬರೆಯದ ಸಾಹಿತ್ಯ ಪ್ರಕಾರಗಳಿಲ್ಲ ಎಂಬ ಮಾತೇ ಅವರ ಸಾಹಿತ್ಯ ಭಂಡಾರಕ್ಕೆ ಸಾ. ಕಥೆ, ಕವನ, ಕಾದಂಬರಿ, ವಿಮರ್ಶೆ ಹೀಗೆ ಸಾಹಿತ್ಯದ ಎಲ್ಲ ಪ್ರಕಾರಗಳಲ್ಲಿಯೂ ಸಾಹಿತ್ಯ ರಚಿಸಿದ್ದಾರೆ.
ಕನ್ನಡದ ರಾಷ್ಟ್ರಕವಿ ಎನಿಸಿದ್ದಾರೆ. ಅವರ ಸಾಹಿತ್ಯವನ್ನು ಅಧ್ಯಯನ ಮಾಡುವ ಮೂಲಕ ಇಂದಿನ ಯುವ ಕವಿ, ಸಾಹಿತಿಗಳು ಕುವೆಂಪು ಅವರನ್ನು ಸ್ಪೂರ್ತಿಯಾಗಿ ತೆಗೆದುಕೊಳ್ಳಬೇಕು ಎಂದು ಹೇಳಿದರು.
ಸಾಹಿತಿ ಅಕ್ಬರ್ ಸಿ.ಕಾಲಿಮಿರ್ಚಿ ಮಾತನಾಡಿ, ಕುವೆಂಪು ಸಾಹಿತ್ಯವನ್ನು ವಿದೇಶಿ ಸಾಹಿತಿಗಳು ಕೂಡ ಪ್ರಶಂಸಿದ್ದಾರೆ. ತಮ್ಮ ಕಥೆ, ಕವನ, ಕಾದಂಬರಿಗಳಲ್ಲಿ ಅವರು ತಮ್ಮ ನೆಲದ ಸೊಗಡು ಕಾಯ್ದಿಟ್ಟುಕೊಂಡಿದ್ದಾರೆ. ಮಲೆನಾಡಿನ ಪ್ರಕೃತಿ, ಜನರ ಜೀವನಶೈಲಿ, ಬದುಕುವ ಪದ್ಧತಿ, ಜಾತಿ ವ್ಯವಸ್ಥೆ, ನೈಸರ್ಗಿಕ ಸೌಂದರ್ಯವನ್ನು ಅತ್ಯಂತ ವೈಭವಪೂರ್ಣವಾಗಿ ಕಣ್ಣಿಗೆ ಕಟ್ಟುವಂತೆ ಚಿತ್ರಿಸಿದ್ದಾರೆ.
ಓದುಗರಿಗೆ ಕಲ್ಪನಾ ಲೋಕ ಕಟ್ಟಿಕೊಡುತ್ತಾರೆ. ಅವರ ಸಾಹಿತ್ಯದ ವಿಷಯ ವಸ್ತು, ಬಳಸುವ ಭಾಷೆಯ ಪಾಂಡಿತ್ಯವನ್ನು ಇಂದಿನ ಸಾಹಿತಿಗಳು ಅಧ್ಯಯನ ಮಾಡಬೇಕು ಎಂದರು.
ಜಿಲ್ಲೆಯ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳು ಕುವೆಂಪು ಕುರಿತ ಕವನಗಳನ್ನು ಹೇಳಿದರು. ಸಾಹಿತಿ ಸಾವಿತ್ರ ಮುಜುಂದಾರ ನಿರೂಪಿಸಿದರು. ಕಲಾವಿದ ರಿಜ್ವಾನ್ ಮುದ್ದಾಬಳ್ಳಿ ನಾಡಗೀತೆ ಹಾಗೂ ಸುಗಮ ಸಂಗೀತ ಕಾರ್ಯಕ್ರಮ ನಡೆಸಿಕೊಟ್ಟರು.
ಇದೇ ಸಂದರ್ಭ ಕನ್ನಡ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕತ ಜಿಲ್ಲೆಯ ಸಾಧಕರನ್ನು ಸನ್ಮಾನಿಸಲಾಯಿತು. ಕನ್ನಡ ಮತ್ತು ಸಂಸ್ಕತಿ ಇಲಾಖೆ ಸಹಾಯಕ ನಿರ್ದೇಶಕ ಕೊಟ್ರೇಶ ಮರಬನಳ್ಳಿ, ದೈಹಿಕ ಶಿಕ್ಷಣಾಧಿಕಾರಿ ಎ.ಬಸವರಾಜ, ಸಾಹಿತಿಗಳಾದ ಎ.ಎಂ.ಮದರಿ, ಎಂ.ಬಿ.ಅಳವಂಡಿ, ವಿವಿಧ ಶಾಲಾ ಕಾಲೇಜುಗಳ ವಿದ್ಯಾರ್ಥಿಗಳು, ಸಾಹಿತಿಗಳು ಇದ್ದರು.