

ಕೊಪ್ಪಳ: ಚುನಾವಣಾ ಕರ್ತವ್ಯದೊಂದಿಗೆ ಕುಡಿವ ನೀರು ಪೂರೈಸಿ. ಅಗತ್ಯವಿದ್ದಲ್ಲಿ ಹೊಸದಾಗಿ ಬೋರ್ವೆಲ್ ಕೊರೆಸಿ ಎಂದು ಡಿಸಿ ನಲಿನ್ ಅತುಲ್ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಜಿಲ್ಲಾ ಟಾಸ್ಕ್ ಪೋರ್ಸ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ದಿನ ಬೆಳಗಾದರೆ ನೀರು ಅವಶ್ಯ. ಅಧಿಕಾರಿಗಳು ಇದನ್ನು ಮನದಲ್ಲಿಟ್ಟುಕೊಂಡು ಕೆಲಸ ಮಾಡಿ. ಕುಡಿವ ನೀರಿನ ಸಮಸ್ಯೆ ಕಂಡುಬಂದಲ್ಲಿ ತಕ್ಷಣ ಸ್ಪಂದಿಸಿ. ಈ ಸಂಬಂಧ ಈವರೆಗೆ ನಡೆದ ಸಭೆಗಳಲ್ಲಿ ನೀಡಿದ ಸೂಚನೆ ಪಾಲಿಸಿ. ಪ್ರತಿ ಗ್ರಾಮಗಳಲ್ಲಿ ಬೋರ್ವೆಲ್, ಖಾಸಗಿ ಬೋರ್ವೆಲ್, ಕಿರು ನೀರು ಪೂರೈಕೆ ಟಕಗಳ ಮಾಹಿತಿ ಸಂಗ್ರಹಿಸಿಟ್ಟುಕೊಳ್ಳಿ. ಸರ್ಕಾರಿ ಬೋರ್ವೆಲ್ನಲ್ಲಿ ನೀರು ಕಡಿಮೆಯಾದಲ್ಲಿ ಖಾಸಗಿ ಬೋರ್ವೆಲ್ ಬಾಡಿಗೆ ಪಡೆಯಿರಿ. ಅಗತ್ಯ ಅನುದಾನವಿದ್ದು, ಯವುದೇ ವಿಳಂಬ ಮಾಡದಿರಿ.
ಖಾಸಗಿ ಬೋರ್ವೆಲ್ ಮಾಲೀಕರಿಗೆ ನಿಯಮಿತವಾಗಿ ಹಣ ಪಾವತಿಸಿ. ಇದರಿಂದ ಬೇರೆಯವರು ನೀರು ನೀಡಲು ಮುಂದೆ ಬರುತ್ತಾರೆ. ಅಗತ್ಯವಿದ್ದಲ್ಲಿ ಟ್ಯಾಂಕರ್ ನೀರು ಒದಗಿಸಿ. ಗ್ರಾಪಂ, ನಗರ, ಸ್ಥಳಿಯ ಸಂಸ್ಥೆಗಳು ಹೊಸ ಬೋರ್ವೆಲ್ ಕೊರೆಸಲು ಕ್ರಮವಹಿಸಿ. ಈ ಸಂಬಂಧ ಪ್ರಸ್ತಾವನೆ ಸಲ್ಲಿಸಿ ಅನುಮೋದನೆ ಪಡೆದುಕೊಳ್ಳಿ ಎಂದು ನಿರ್ದೇಶಿಸಿದರು.
ಜಿಪಂ ಸಿಇಒ ರಾಹುಲ್ ರತ್ನಂ ಪಾಂಡೆಯ, ಎಡಿಸಿ ಸಾವಿತ್ರಿ ಕಡಿ, ಜಿಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ತಹಸೀಲ್ದಾರ್ಗಳು, ತಾಪಂ ಇಒಗಳಿದ್ದರು.