ಕೋಳೂರಿನಲ್ಲಿ 24*7 ಕುಡಿವ ನೀರು

district koppal kolooru village drinking water jjm
Published on

ಕೊಪ್ಪಳ: ತಾಲೂಕಿನ ಕೋಳೂರು ಗ್ರಾಮದಲ್ಲಿ ಜೆಜೆಎಂ ಕಾಮಗಾರಿಯಡಿ ಎಲ್ಲ ಮನೆಗಳಿಗೆ 24*7 ಕುಡಿವ ನೀರು ಪೂರೈಸಲಾಗುತ್ತಿದೆ. ಯೋಜನೆಯಡಿ ರಾಜ್ಯದಲ್ಲಿ ನಿರಂತರ ನೀರು ಪೂರೈಸುವ ಮೂರನೇ ಗ್ರಾಮ ಎಂಬ ಸಾಧನೆ ಮಾಡಿದೆ.

ರಾಜ್ಯ ಹಾಗೂ ಜಿಲ್ಲೆಯ ಬಹುತೇಕ ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿಗಳು ಬಹುಪಾಲು ನಿರುಪಯುಕ್ತ ಎಂಬಂತಾಗಿವೆ. ಕೋಳೂರಿನಲ್ಲಿ ಜಲ ಜೀವನ ಮಿಷಿನ್​ ಯೋಜನೆಯಡಿ 412 ಮನೆಗಳಿಗೆ ನಳ ಅಳವಡಿಕೆಗೆ ಯೋಜಿಸಲಾಗಿದೆ. ಅದರಂತೆ ಪೈಪ್​ಲೈನ್​ ಕಾಮಗಾರಿ ನಡೆಸಿದ್ದು, ಮನೆ ಮನೆಗೆ ನಳ ಕೂಡಿಸಲಾಗಿದೆ. ಬೋರ್​ವೆಲ್​ಗಳ ಮೂಲಕ ಮೇಲ್ತೊಟ್ಟಿಗೆ ನೀರು ಸಂಗ್ರಹಿಸಲಾಗುತ್ತಿದೆ. ನಳ ಮೂಲಕ ಪ್ರತಿ ಮನೆಗೆ ವಾರದ ಏಳು ದಿನ ನಿರಂತರ ನೀರು ಪೂರೈಸಲಾಗುತ್ತಿದೆ. ಪ್ರತಿ ವ್ಯಕ್ತಿಗೆ ನಿತ್ಯ 55 ಲೀಟರ್​ ನೀರಿನಂತೆ ಒದಗಿಸಲಾಗುತ್ತಿದೆ. ನಳಗಳಿಗೆ ಮೀಟರ್​ ಅಳವಡಿಸಿದ್ದು, ಎಷ್ಟು ನೀರು ಬಳಕೆ ಆಗಲಿದೆ ಎಂಬ ಮಾಹಿತಿಯೂ ಲಭ್ಯವಾಗುತ್ತಿದೆ.

ರಾಜ್ಯದ ಬೀದರ್​ ಹಾಗೂ ಕಲಬುರ್ಗಿ ಜಿಲ್ಲೆಗಳ ತಲಾ ಒಂದು ಗ್ರಾಮಗಳಲ್ಲಿ ಜೆಜೆಎಂನಡಿ ನಿರಂತರ ನೀರು ಪೂರೈಸಲಾಗುತ್ತಿದೆ. ಇದೀಗ ಮೂರನೇ ಗ್ರಾಮವಾಗಿ ಕೋಳೂರು ಸಾಧನೆ ಮಾಡಿದೆ. ಸ್ಥಳಿಯ ಸ್ವಸಹಾಯ ಸಂಗಳ ಮೂಲಕ ಮಾಸಿಕ ನೀರಿನ ಕರ ವಸೂಲಿ ಮಾಡಲಾಗುತ್ತಿದೆ. ಸಮಸ್ಯೆಗಳಾದಲ್ಲಿ ಪಂಚಮಿತ್ರ ಆ್ಯಪ್​ನಲ್ಲಿ ದೂರು ಸಲ್ಲಿಸಿದಲ್ಲಿ ಎರಡು ಗಂಟೆಯೊಳಗೆ ಪರಿಹರಿಸಲು ಯೋಜನೆ ಹಾಕಿಕೊಳ್ಳಲಾಗಿದೆ.

ಶುಕ್ರವಾರ ಸಂಸದ ರಾಜಶೇಖರ ಹಿಟ್ನಾಳ ಯೋಜನೆಗೆ ಚಾಲನೆ ನೀಡಿದರು. ದದೇಗಲ್​ನ ಆತ್ಮಾನಂದ ಭಾರತಿ ಸ್ವಾಮೀಜಿ ಸಾನ್ನಿಧ್ಯವಹಿಸಿದ್ದರು. ಕೋಳೂರು ಗ್ರಾಪಂ ಅಧ್ಯೆ ಶಿವಮ್ಮ ಪೂಜಾರ, ಉಪಾಧ್ಯಕ್ಷ ಶಿವಪ್ಪ ಕಾತರಕಿ, ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ, ತಾಪಂ ಇಒ ದುಂಡಪ್ಪ ತುರಾದಿ, ಗ್ರಾಮೀಣ ಕುಡಿವ ನೀರು ಮತ್ತು ನೈರ್ಮಲ್ಯ ವಿಭಾಗದ ಇಇ ಮಹೇಶ ಶಾಸ್ತ್ರಿ, ಎಇಇ ವಿಲಾಸರಾವ್​ ಬೋಸ್ಲೆ, ಪಿಡಿಒ ಶೇಖರಪ್ಪ ಮಡಿವಾಳರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net