ನಿಲ್ದಾಣಗಳಲ್ಲಿರಲಿ ಮಕ್ಕಳ ಸ್ನೇಹಿ ವಾತಾವರಣ

district koppal kkrtc meeting childrens protaction
Published on

ಕೊಪ್ಪಳ: ಬಸ್​ಗಳಲ್ಲಿ ಹಾಗೂ ನಿಲ್ದಾಣಗಳಲ್ಲಿ ಮಕ್ಕಳ ಸ್ನೇಹಿ ವಾತಾವರಣ ಇರುವಂತೆ ನೋಡಿಕೊಳ್ಳಿ ಎಂದು ರಾಜ್ಯ ಮಕ್ಕಳ ರಕ್ಷಣಾ ಆಯೋಗ ಸದಸ್ಯ ಶೇಖರಗೌಡ ರಾಮತ್ನಾಳ ಹೇಳಿದರು.

ನಗರದ ಕೆಕೆಆರ್​ಟಿಸಿ ವಿಭಾಗೀಯ ಕಚೇರಿಯಲ್ಲಿ ಗುರುವಾರ ಸಾರಿಗೆ ಅಧಿಕಾರಿಗಳ ಸಭೆ ನಡೆಸಿ ಮಾತನಾಡಿದರು.

ದೇಶದ ಅಭಿವೃದ್ಧಿಯಲ್ಲಿ ಸಾರಿಗೆ ವ್ಯವಸ್ಥೆ ಪಾತ್ರ ಮಹತ್ವದ್ದಾಗಿದೆ. ಅಭಿವೃದ್ಧೀಶಿಲ ರಾಷ್ಟ್ರದಲ್ಲಿ ಸಾರ್ವಜನಿಕ ಸಾರಿಗೆ ಮೇಲೆ ಜನರ ಅವಲಂಬನೆ ಹೆಚ್ಚು. ಗ್ರಾಮೀಣ ಜನರು ಅಧಿಕ ಸಂಖ್ಯೆಯಲ್ಲಿ ಸಾರಿಗೆ ವಾಹನ ನೆಚ್ಚಿಕೊಂಡಿದ್ದಾರೆ. ಮಕ್ಕಳ ಶಿಕ್ಷಣ ಹಕ್ಕು ಸಾಕಾರಗೊಳ್ಳುವಲ್ಲಿ ಸಾರಿಗೆ ಪಾತ್ರ ಮಹತ್ವದ್ದಿದೆ. ಸಾರಿಗೆ ಸಿಬ್ಬಂದಿ ಮಕ್ಕಳೊಂದಿಗೆ ಅನುಚಿತ ವರ್ತನೆ ತೋರುತ್ತಿರುವುದು ಮಾಧ್ಯಮಗಳಲ್ಲಿ ವರದಿಯಾಗುತ್ತಿದೆ. ಜನರೂ ಸಿಬ್ಬಂದಿ ಬೆದರಿಸಲು ಮಕ್ಕಳಪರವಾದ ಕಾನೂನು ಬಳಕೆ ಮಾಡಿಕೊಳ್ಳುತ್ತಿದ್ದಾರೆ. ಇದೆಲ್ಲವೂ ಆಯೋಗದ ಗಮನದಲ್ಲಿದೆ. ಹೀಗಾಗಿ ಮಕ್ಕಳಸ್ನೇಹಿ ಸಾರಿಗೆ ಕಾರ್ಯಕ್ರಮ ವಿನೂತನ ಕಾರ್ಯಕ್ರಮ ಜಾರಿಗೊಳಿಸಲಾಗಿದೆ ಎಂದರು.

ಸಾರಿಗೆ ಅಧಿಕಾರಿ, ಸಿಬ್ಬಂದಿ, ಚಾಲಕ, ನಿರ್ವಾಹಕರಿಗೆ ಮಕ್ಕಳ ಹಕ್ಕುಗಳು ಮತ್ತು ಮಕ್ಕಳ ಪರವಾದ ಕಾನೂನುಗಳ ಅರಿವು ಕಾರ್ಯಾಗಾರ ಏರ್ಪಡಿಸುವ ಮೂಲಕ ಮಕ್ಕಳ ಸ್ನೇಹಿ ವಾತಾವರಣ ನಿರ್ಮಿಸಬಹುದು. ಮಕ್ಕಳೊಂದಿಗೆ ಸೌಜನ್ಯದಿಂದ ವ್ಯವಹರಿಸಬೇಕು. ಶಾಲಾ ಸಮಯಕ್ಕೆ ಅನುಗುಣವಾಗಿ ಬಸ್​ ಸೇವೆ ನೀಡಿ. ಸಮುದಾಯದಲ್ಲಿ ಮಕ್ಕಳ ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸಿ. ಅವಕಾಶ ಇರುವೆಡೆ ಮಕ್ಕಳ ಕಾನೂನುಗಳ ಕುರಿತು ಗೋಡೆ ಬರಹ ಬರೆಯಿಸಿ. ಬಸ್​ ನಿಲ್ದಾಣಗಳಲ್ಲಿ ಜಿಂಗಲ್ಸ್​ಗಳ ಮೂಲಕ ಪ್ರಚಾರ ನಡೆಸಿ ಎಂದು ಸೂಚಿಸಿದರು.

ಕೆಕೆಆರ್​ಟಿಸಿ ವಿಭಾಗೀಯ ನಿಯಂತ್ರಣಾಧಿಕಾರಿ ವೆಂಕಟೇಶ ಎಂ., ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ಮಹಾಂತಸ್ವಾಮಿ ಪುಜಾರ, ವಿವಿಧ ನಿಗಮಗಳ ವ್ಯವಸ್ಥಾಪಕರು, ಮಕ್ಕಳ ರಕ್ಷಣಾ ಟಕ ಸಿಬ್ಬಂದಿ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net