

ವಿಜಯವಾಣಿ ವಿಶೇಷ ಕೊಪ್ಪಳ
ಜಿಲ್ಲೆಯಲ್ಲಿ ಕಿಮ್ಸ್ ಆರಂಭವಾಗಿ ದಶಕವಾಗಿದೆ. ಎಂಬಿಬಿಎಸ್ ಸೀಟ್ ಹೆಚ್ಚಳ ಹಾಗೂ ಎಲ್ಲ ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಅಧ್ಯಯನಕ್ಕೆ ಅವಕಾಶ ಕಲ್ಪಿಸಲು ಹೆಚ್ಚುವರಿ ಹುದ್ದೆ ಸೃಜನೆ ಅವಶ್ಯ. ಈ ನಿಟ್ಟಿನಲ್ಲಿ ಎರಡು ಬಾರಿ ಪ್ರಸ್ತಾವನೆ ಸಲ್ಲಿಕೆಯಾಗಿದ್ದು ಸರ್ಕಾರ ಅನುಮೋದನೆ ನೀಡಬೇಕಿದೆ.
2013&14ರಲ್ಲಿ ಕೊಪ್ಪಳದಲ್ಲಿ ವೈದ್ಯಕಿಯ ವಿಜ್ಞಾನ ಸಂಸ್ಥೆ ಆರಂಭವಾಗಿದೆ. 150 ಎಂಬಿಬಿಎಸ್ ಪದವಿ ಸೀಟ್ಗಳು ಲಭ್ಯವಿದ್ದು ಕಲ್ಯಾಣ ಕರ್ನಾಟಕ ಭಾಗದ ವಿದ್ಯಾರ್ಥಿಗಳಿಗೆ ನೆರವಾಗುತ್ತಿದೆ. 371(ಜೆ) ಸೌಲಭ್ಯ ಕಾರಣ ಕಕ ಭಾಗದ ಏಳು ಜಿಲ್ಲೆಗಳ ಮಕ್ಕಳಿಗೆ ಅನುಕೂಲವಾಗುತ್ತಿದೆ. 20 ವಿಭಾಗಗಳು ಕಾರ್ಯಾರಂಭ ಆಗಿವೆ. ಕಳೆದ ಮೂರು ವರ್ಷಗಳಿಂದ ಹಂತ ಹಂತವಾಗಿ ಹಲವು ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿಗಳು ಆರಂಭವಾಗುತ್ತಿವೆ. ಈಗಾಗಲೇ 14 ವಿಭಾಗಗಳಲ್ಲಿ ಸ್ನಾತಕೋತ್ತರ ಪದವಿ ಆರಂಭಿಸಲಾಗಿದೆ. ಪ್ರಸಕ್ತ ವರ್ಷ ಇಎನ್ಟಿ, ಆಪ್ತಾಮಾಲಜಿ, ಚರ್ಮರೋಗ ವಿಭಾಗ ವಿಷಯದಲ್ಲಿ ಸ್ನಾತಕೋತ್ತರ ಪದವಿ ಆರಂಭಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿದೆ.
ಭಾರತೀಯ ವೈದ್ಯಕಿಯ ಮಂಡಳಿ (ಎಂಸಿಐ) ನಿಯಮಾವಳಿ ಅನ್ವಯ ಕಾಲೇಜಿಗೆ ಪ್ರತಿ ವರ್ಷ ಸೌಕರ್ಯಗಳು ಹೆಚ್ಚುತ್ತಿವೆ. ವಾರ್ಷಿಕ 150 ಎಂಬಿಬಿಎಸ್ ಪದವೀಧರರು ಪದವಿ ಮುಗಿಸಿ ಹೊರಬರುತ್ತಿದ್ದಾರೆ. ಸ್ಥಳಿಯವಾಗಿಯೇ ಪಿಜಿ ಮಾಡುವ ಸೌಲಭ್ಯ ದೊರೆಯುತ್ತಿದೆ. ಸದ್ಯ ಜಿಲ್ಲಾಸ್ಪತ್ರೆಯನ್ನೇ ಬೋಧಕ ಆಸ್ಪತ್ರೆಯಾಗಿ ಮಾರ್ಪಾಡು ಮಾಡಿ ಕಾಲೇಜು ನಡೆಸಲಾಗುತ್ತಿದೆ. ಕಿಮ್ಸ್ಗಾಗಿಯೇ ಕಾಲೇಜು ಕಟ್ಟಡಕ್ಕೆ ಹೊಂದಿಕೊಂಡು 450 ಹಾಸಿಗೆಗಳ ನೂತನ ಆಸ್ಪತ್ರೆ ನಿರ್ಮಿಸಲಾಗಿದೆ. ಕಟ್ಟಡ ಕಾಮಗಾರಿ ಪೂರ್ಣಗೊಂಡಿದ್ದು, ಉಪಕರಣಗಳ ಅಳವಡಿಕೆಗೆ ಕಾರ್ಯವೂ ಬಹುತೇಕ ಮುಗಿದಿದೆ. ಶ್ರೀ ಆಸ್ಪತ್ರೆ ಉದ್ಘಾಟನೆ ಆಗಲಿದೆ. ಇದರಿಂದ ರೋಗಿಗಳಿಗೆ ಇನ್ನು ಹೆಚ್ಚಿನ ಸೇವೆ ನೀಡಲು ಕಿಮ್ಸ್ ಸಿದ್ಧತೆ ಮಾಡಿಕೊಳ್ಳುತ್ತಿದೆ.
ಒಂದೆಡೆ ಕಟ್ಟಡ ಸೇರಿ ಇತರ ಸೌಲಭ್ಯಗಳಿದ್ದರೆ ಮತ್ತೊಂದೆಡೆ ಬೋಧಕ, ಬೋಧಕೇತರ ಸಿಬ್ಬಂದಿ ನೇಮಕಾತಿಯೂ ಕಾಲ ಕಾಲಕ್ಕೆ ತಕ್ಕಂತೆ ನಡೆಯಬೇಕು. ಹಿಂದುಳಿದ ಪ್ರದೇಶ, ಸೌಲಭ್ಯಗಳ ಕೊರತೆ ಕಾರಣ ವೈದ್ಯರು ಈ ಭಾಗಕ್ಕೆ ಆಗಮಿಸುತ್ತಿಲ್ಲ. ಎಂಸಿಐ ಹಿಂದಿನ ನಿಯಮಾವಳಿಯಂತೆ ಕಿಮ್ಸ್ಗೆ 199 ಬೋಧಕ ಹಾಗೂ ಐದು ಎಎಂಒ ಹುದ್ದೆಗಳು ಮಂಜೂರಾಗಿವೆ. 143 ಹುದ್ದೆಗಳು ಭರ್ತಿಯಾಗಿದ್ದು ಬಾಕಿ 51 ಖಾಲಿ ಉಳಿದಿವೆ. ನಿರ್ದೇಶಕರು ವಾಕ್ಇನ್ ಇಂಟರ್ವ್ಯೂವ್ ನಡೆಸುತ್ತಿದ್ದರೂ ಹುದ್ದೆಗಳಷ್ಟು ಅರ್ಜಿ ಸಲ್ಲಿಕೆಯಾಗುತ್ತಿಲ್ಲ. ಪರಿಣಾಮ 51 ಹುದ್ದೆಗಳು ಖಾಲಿ ಉಳಿದಿವೆ. ಇತ್ತೀಚೆಗೆ ಕರೆದ ಅರ್ಜಿಯಲ್ಲೂ ಕೇವಲ ಐವರು ಅರ್ಜಿ ಸಲ್ಲಿಸಿದ್ದಾರೆ. ಅವರನ್ನು ನೇಮಿಸಿಕೊಂಡರೂ ಇನ್ನೂ 46 ಹುದ್ದೆಗಳು ಹಾಗೇ ಉಳಿಯಲಿವೆ.
ಎಂಸಿಐ 2022-23ರಲ್ಲಿ ಹೊಸ ನಿಯಮಾವಳಿ ರಚಿಸಿದೆ. ಅದರ ಅನ್ವಯ 150 ಎಂಬಿಬಿಎಸ್ ಸೀಟ್ಗಳಿರುವ ಮೆಡಿಕಲ್ ಕಾಲೇಜುಗಳಲ್ಲಿ ಈಗಿರುವ ಹುದ್ದೆಗಳಿಗಿಂದ ಹೆಚ್ಚುವರಿ 31 ಹುದ್ದೆಗಳು ಅವಶ್ಯ ಇದೆ. ಇವು ಭರ್ತಿಯಾದರೆ ಭವಿಷ್ಯದಲ್ಲಿ 150&200 ಸೀಟ್ಗಳವರೆಗೆ ದಾಖಲಾತಿಗೆ ಅವಕಾಶ ಹೆಚ್ಚಲಿದೆ. ಇದರಿಂದ ಪ್ರತಿವರ್ಷ 50 ಹೆಚ್ಚುವರಿ ವಿದ್ಯಾರ್ಥಿಗಳಿಗೆ ಎಂಬಿಬಿಎಸ್ ಪದವಿ ಅಧ್ಯಯನಕ್ಕೆ ದಾರಿಯಾಗಲಿದೆ. ಸರ್ಕಾರ ಹೊಸ ಮಾರ್ಗಸೂಚಿ ಅನ್ವಯ ಹುದ್ದೆಗಳನ್ನು ಮಂಜೂರು ಮಾಡಬೇಕಿದೆ.
ಎರಡು ಬಾರಿ ಪ್ರಸ್ತಾನವೆ ಸಲ್ಲಿಕೆ
ಹೊಸ ನಿಯಮದಂತೆ ಕಿಮ್ಸ್ ಹೆಚ್ಚುವರಿ 31 ಹುದ್ದೆಗಳನ್ನು ಸೃಜಿಸಬೇಕು. ಅದಕ್ಕೆ ಬೇಕಾಗುವ ಆರ್ಥಿಕ ವೆಚ್ಚಗಳಿಗೆ ಅನುಮತಿ ಕೋರಿ ಕಿಮ್ಸ್ ನಿರ್ದೇಶಕರು ಸರ್ಕಾರಕ್ಕೆ ಪ್ರಸ್ತಾನವನೆ ಸಲ್ಲಿಸಿದ್ದಾರೆ. ಈ ಮೊದಲು ಸಲ್ಲಿಸಿದ್ದ ಪ್ರಸ್ತಾವನೆಯನ್ನೂ ಆರ್ಥಿಕ ಇಲಾಖೆ ಸಂಪುಟ ಅನುಮೋದನೆ ಆಗಿಲ್ಲವೆಂಬ ಕಾರಣ ನೀಡಿ ತಿರಸ್ಕರಿಸಿದೆ. ಸದ್ಯ 150 ಸೀಟ್ ಇರುವ ಎಲ್ಲ ಕಾಲೇಜುಗಳಿಗೆ ಹೆಚ್ಚುವರಿ ಹುದ್ದೆ ಸೃಜಿಸಬೇಕು. ಹೀಗಾಗಿ ಸಂಪುಟದಲ್ಲಿ ಅನುಮೋದನೆ ಆಗಿ ವೈದ್ಯಕಿಯ ಶಿಕ್ಷಣ ಇಲಾಖೆ ಆದೇಶ ಹೊರಡಿಸಬೇಕೆಂದು ತಿಳಿಸಿದೆ ಎನ್ನಲಾಗಿದೆ. ಈ ಸಂಬಂಧ ಕಿಮ್ಸ್ ಮತ್ತೊಮ್ಮೆ ಎಂಸಿಐ ನಿಯಮಾವಳಿ ಪ್ರಸ್ತಾಪಿಸಿ ಮರು ಪ್ರಸ್ತಾವನೆ ಸಲ್ಲಿಸಿದೆ. ಕೊಪ್ಪಳ ಕಕ ಭಾಗದ ಜಿಲ್ಲೆಯಾಗಿದ್ದು, ಆದ್ಯತೆ ಮೇರೆಗೆ ಹೆಚ್ಚುವರಿ ಹುದ್ದೆ ಸೃಜಿಸಿದಲ್ಲಿ ಈ ಭಾಗದ ವಿದ್ಯಾರ್ಥಿಗಳ ಕಲಿಕೆಗೆ ಅನುಕೂಲವಾಗಲಿದೆ. ಸರ್ಕಾರ ಪ್ರಸ್ತಾವನೆಯನ್ನು ಗಂಭೀರವಾಗಿ ಪರಿಗಣಿಸಬೇಕಿದೆ.