ಕೊಪ್ಪಳ: ಕನಕಗಿರಿ ಪ್ರಾಥಮಿಕ ಸಹಕಾರಿ ಕೃಷಿ ಮತ್ತು ಗ್ರಾಮೀಣಾಭಿವೃದ್ಧಿ ಬ್ಯಾಂಕ್ (ಪಿಕಾರ್ಡ್)ಗೆ ಚುನಾವಣೆ ಘೋಷಣೆಯಾಗಿದೆ.
ಸಹಕಾರಿ ಇಲಾಖೆ ನಿಯಮಾವಳಿ ಅನ್ವಯ ಮುಂದಿನ ಐದು ವರ್ಷಕ್ಕೆ ಆಡಳಿತ ಮಂಡಳಿ ನಿರ್ದೇಶಕರ ಸ್ಥಾನಕ್ಕೆ ಚುನಾವಣೆ ನಡೆಸಲು ಅಧಿಸೂಚನೆ ಹೊರಡಿಸಿದೆ. ಒಟ್ಟು 12 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. ಸುಳೇಕಲ್, ಹಿರೇಖೇಡಾ, ನವಲಿ, ಜೀರಾಳ ಕಲ್ಗುಡಿ, ಕನಕಗಿರಿ, ಮುಸಲಾಪುರ (ಪಜಾ), ಹುಲಿ ಹೈದರ (ಪಪಂ), ಕರಡೋಣ, ಕನಕಗಿರಿ (ಹಿಂದುಳಿದ ವರ್ಗ ಅ), ಚಿಕ್ಕಮಾದಿನಾಳ, ಗೌರಿಪುರ (ಮಹಿಳೆ), ಒಂದು ಸಾಮಾನ್ಯ ಕ್ಷೇತ್ರಕ್ಕೆ ಚುನಾವಣೆ ನಿಗದಿಯಾಗಿದೆ.
ಡಿ.21ನಾಮಪತ್ರ ಸಲ್ಲಿಸಲು ಕೊನೆಯ ದಿನ. 22ರಂದು ನಾಮಪತ್ರ ಪರಿಶೀಲನೆ ಹಾಗೂ ಕ್ರಮಬದ್ಧ ನಾಮಪತ್ರಗಳ ಪಟ್ಟಿ ಪ್ರಕಟಣೆ. 23ರಂದು ಮಧ್ಯಾಹ್ನ 3 ಗಂಟೆವರೆಗೆ ನಾಮಪತ್ರ ವಾಪಸ್ ಪಡೆಯಲು ಕೊನೆಯ ದಿನವಿದ್ದು, ಬಳಿಕ ಅಂತಿಮ ಅಭ್ಯರ್ಥಿಗಳ ಪಟ್ಟಿ ಪ್ರಕಟಗೊಳ್ಳಲಿದೆ. ಸಂಜೆ 4 ಗಂಟೆ ಬಳಿಕ ಚಿಹ್ನೆ ಹಂಚಿಕೆ ಮಾಡಲಾಗುವುದು. ಡಿ.25ರಂದು ಚಿಹ್ನೆಯೊಂದಿಗೆ ಅಭ್ಯರ್ಥಿಗಳ ಪಟ್ಟಿ ಪ್ರಕಟವಾಗಲಿದೆ. ಡಿ.29ರಂದು ಬೆಳಗ್ಗೆ 11ರಿಂದ ಸಂಜೆ 4 ಗಂಟೆವರೆಗೆ ಮತದಾನ ನಡೆಯಲಿದೆ. ಬಳಿಕ ಮತ ಎಣಿಕೆ ನಡೆಯಲಿದ್ದು, ಲಿತಾಂಶ ಪ್ರಕಟವಾಗಲಿದೆ.
ಪಿಕಾರ್ಡ್ ಬ್ಯಾಂಕ್ ಮಂಜೂರಾತಿಗೆ ನಿಯಮಾನುಸಾರ ಅರ್ಜಿ ಸಲ್ಲಿಸಿದರೂ ಸಹಕಾರಿ ಸಂಗಳ ಉಪ ನಿಬಂಧಕರು ನೋಂದಣಿ ಮಾಡಿರಲಿಲ್ಲ. ಇದನ್ನು ಪ್ರಶ್ನಿಸಿ ಕೆಲವರು ಧಾರವಾಡ ಹೈಕೋರ್ಟ್ ಮೆಟ್ಟಿಲೇರಿದ್ದರು. ಕೋರ್ಟ್ ಸೂಚನೆ ಕೊಟ್ಟರೂ ಅಧಿಕಾರಿಗಳು ಬ್ಯಾಂಕ್ ನೋದಂಣಿ ಮಾಡಿರಲಿಲ್ಲ. ಈ ಬಗ್ಗೆ ವಿಜಯವಾಣಿ "ಪಿಕಾರ್ಡ್ ನೋಂದಣಿಗೆ ಹಿಂದೇಟು' ಶೀರ್ಷಿಕೆಯಡಿ ನ.9ರಂದು ವಿಶೇಷ ವರದಿ ಪ್ರಕಟಿಸಿತ್ತು. ಎಚ್ಚೆತ್ತ ಅಧಿಕಾರಿಗಳು ನೋಂದಣಿ ಮಾಡಿಕೊಟ್ಟಿದ್ದರು. ಸದ್ಯ ನೂತನ ಬ್ಯಾಂಕ್ ಆಡಳಿತ ಮಂಡಳಿ ನಿರ್ದೇಶಕ ಸ್ಥಾನಕ್ಕೆ ಚುನಾವಣೆ ಘೋಷಣೆಯಾಗಿದೆ.