ರಾಜಣ್ಣಗೆ ಸಚಿವ ಸ್ಥಾನ ನೀಡಿ

Published on

ಕೊಪ್ಪಳ: ಕೆ.ಎನ್​.ರಾಜಣ್ಣ ಅವರನ್ನು ಸಂಪುಟದಿಂದ ಏಕಾಏಕಿ ವಜಾಗೊಳಿಸಿದ್ದು, ವಾಲ್ಮೀಕಿ ಸಮುದಾಯಕ್ಕೆ ನೋವು ತಂದಿದೆ. ತಕ್ಷಣ ಅವರನ್ನು ಸಂಪುಟಕ್ಕೆ ಸೇರಿಸಿಕೊಳ್ಳಬೇಕು ಎಂದು ಅಖಿಲ ಕರ್ನಾಟಕ ವಾಲ್ಮೀಕಿ ನಾಯಕ ಮಹಾಸಭಾ ಮಾಜಿ ಜಿಲ್ಲಾಧ್ಯಕ್ಷ ಟಿ.ರತ್ನಾಕರ ಆಗ್ರಹಿಸಿದರು.

ನಗರದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಕೆ.ಎನ್​.ರಾಜಣ್ಣ ನಮ್ಮ ಸಮುದಾಯದ ಆಸ್ತಿ. ಪಕ್ಷದಲ್ಲಿ ಅವರು ತಪ್ಪು ಮಾಡಿದ್ದರೆ ಅದರ ಬಗ್ಗೆ ತಿಳಿಸಬೇಕಿತ್ತು. ನೋಟಿಸ್​ ನೀಡಿ ಉತ್ತರ ಪಡೆಯಬಹುದಿತ್ತು. ಇಲ್ಲವೇ ಹೈಕಮಾಂಡ್​ ಕರೆಸಿಕೊಂಡು ತಿಳಿಹೇಳಲು ಅವಕಾಶವಿತ್ತು. ಅಥವಾ ರಾಜೀನಾಮೆ ನೀಡುವಂತೆ ತಿಳಿಸಿದ್ದರೆ ರಾಜಣ್ಣ ಅವರೇ ರಾಜೀನಾಮೆ ಕೊಡುತ್ತಿದ್ದರು. ಆದರೆ, ಅದ್ಯಾವುದನ್ನೂ ಮಾಡದೆ ಏಕಾಏಕಿ ವಜಾ ಮಾಡಿದ್ದು ಸರಿಯಾದ ನಡೆ ಅಲ್ಲ. ಇದರಿಂದ ಸಮುದಾಯಕ್ಕೆ ಸಾಕಷ್ಟು ನೋವಾಗಿದೆ ಎಂದರು.

ಜಿಲ್ಲಾಧ್ಯಕ್ಷ ಡಾ.ಕೆ.ಎನ್​.ಪಾಟೀಲ್​ ಮಾತನಾಡಿ, ಇದ್ದದ್ದನ್ನು ನೇರವಾಗಿ ಹೇಳುವ ಗುಣದವರು ರಾಜಣ್ಣ. ಬಿ.ನಾಗೇಂದ್ರ ಭ್ರಷ್ಟಾಚಾರ ಆರೋಪ ಎದುರಿಸುತ್ತಿದ್ದರೂ ಕೇಳಿ ರಾಜೀನಾಮೆ ಪಡೆದರು. ಆದರೆ, ರಾಜಣ್ಣ ವಿಷಯದಲ್ಲಿ ಹೀಗಾಗಿಲ್ಲ. ಇದು ಸರಿಯಾದ ನಡೆ ಅಲ್ಲ. ಪರಿಶಿಷ್ಟ ಪಂಗಡದ 14 ಶಾಸಕರು ಈ ಬಗ್ಗೆ ನಿಯೋಗ ತೆರಳಿದ್ದಾರೆ. ರಾಜಣ್ಣ ಹಾಗೂ ಬಿ.ನಾಗೇಂದ್ರ ಅವರಿಗೆ ಮತ್ತೆ ಸಚಿವ ಸ್ಥಾನ ನೀಡಬೇಕು. ಇಲ್ಲವೇ ವಾಲ್ಮೀಕಿ ಸಮುದಾಯದ ಶಾಸಕರಿಬ್ಬರಿಗೆ ಸಚಿವ ಸ್ಥಾನ ಕಲ್ಪಿಸಿ ಸಮುದಾಯಕ್ಕೆ ನ್ಯಾಯ ಒದಗಿಸಬೇಕೆಂದು ಒತ್ತಾಯಿಸಿದರು.

ಪ್ರಮುಖರಾದ ರಾಮಣ್ಣ ಕಲ್ಲನವರ, ಮಂಜುನಾಥ ಗೊಂಡಬಾಳ ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net