

ಕೊಪ್ಪಳ: ಅಸಂಘಟಿತ ವರ್ಗಕ್ಕೆ ಸರ್ಕಾರ ಅನೇಕ ಸೌಲಭ್ಯ ಕಲ್ಪಿಸಿದೆ. ಅರ್ಹರು ಅವುಗಳನ್ನು ಪಡೆದುಕೊಳ್ಳುವಂತೆ ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ ಹೇಳಿದರು.
ತಾಲೂಕಿನ ದನಕನದೊಡ್ಡಿ ಗ್ರಾಮದ ಕೆರೆ ಹೂಳೆತ್ತುವ ಕಾಮಗಾರಿ ಸ್ಥಳದಲ್ಲಿ ಬುಧವಾರ ಹಮ್ಮಿಕೊಂಡಿದ್ದ ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿದರು.
ದೇಶದ ಆರ್ಥಿಕತೆ ದುಡಿವ ವರ್ಗಗಳ ಮೇಲೆ ನಿಂತಿದೆ. ಅಸಂಘಟಿತ ವರ್ಗಗಳಿಗೆ ದುಡಿಮೆ ಇದ್ದರೆ ಕುಟುಂಬ ನಿರ್ವಹಣೆ ಸಾಧ್ಯ. ದೇಶದ ಬೆಳವಣಿಗೆಯಲ್ಲಿ ಅಸಂಟಿತ ವಲಯದ ಪಾತ್ರ ದೊಡ್ಡದಿದೆ. ಸರ್ಕಾರ ಅನೇಕ ಯೋಜನೆ ರೂಪಿಸಿದೆ. ಅರ್ಹರು ಅವುಗಳನ್ನು ಪಡೆದುಕೊಳ್ಳಿ. ನಿಮಗೆಲ್ಲ ಕಾನೂನು ತಿಳಿವಳಿಕೆ ನೀಡಲು ಕಾರ್ಯಕ್ರಮ ಆಯೋಜಿಸಲಾಗಿದೆ. ಕೆಲಸದೊಂದಿಗೆ ಸರ್ಕಾರದ ಯೋಜನೆಗಳನ್ನು ಪಡೆದುಕೊಳ್ಳಿ ಎಂದು ಸಲಹೆ ನೀಡಿದರು.
ತಾಪಂ ಇಒ ದುಂಡಪ್ಪ ತುರಾದಿ ಮಾತನಾಡಿ, ಸಮುದಾಯ ಕಾಮಗಾರಿಗಳ ಜತೆಗೆ ವೈಯಕ್ತಿಕ ಕಾಮಗಾರಿಗಳನ್ನು ಬಳಸಿಕೊಳ್ಳಿ. ನರೇಗಾದಡಿ ದನದಶೆಡ್, ಮೆಕೆಶೆಡ್, ಕೋಳಿಶೆಡ್, ಹಂದಿಶೆಡ್ ಮತ್ತು ತೋಟಗಾರಿಕೆ, ರೇಷ್ಮೇ ಕಾಮಗಾರಿಗಳನ್ನು ಕೈಗೊಳ್ಳಲು ಅವಕಾಶವಿದೆ ಎಂದರು.
ಕಾರ್ಮಿಕ ನಿರೀಕ್ಷಕಿ ಮಂಜುಳಾ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಶರಣಪ್ಪ ಮಾತನಾಡಿದರು. ಗ್ರಾಪಂ ಅಧ್ಯಕ್ಷ ಗಂಗಪ್ಪ ನಾಯಕ, ಪಂಚಾಯತ್ ರಾಜ್ ಸಹಾಯಕ ನಿರ್ದೇಶಕ ಮಹೇಶ್, ಗ್ರಾಪಂ ಸದಸ್ಯರಾದ ರವಿಕುಮಾರ ಒಂಟಿಗಾರ, ಪಾರಮ್ಮ ಕೊಳ್ಳಿ, ಶಾಂತಮ್ಮ ಬಸವರಾಜ, ಪಿಡಿಒ ಯಮನೂರಪ್ಪ ಕಬ್ಬಣನವರ, ತಾಲೂಕ ಐಇಸಿ ಸಂಯೋಜಕ ದೇವರಾಜ ಪತ್ತಾರ, ಸಮುದಾಯ ಆರೋಗ್ಯ ಸುರಕ್ಷಾಧಿಕಾರಿ ಫಾಮಿದಾ, ಶಬ್ಬೀರ್, ತಾಂತ್ರಿಕ ಸಹಾಯಕ ಮಂಜುನಾಥ ಮಾದಾಪುರ ಇತರರಿದ್ದರು.