

ಕೊಪ್ಪಳ: ಯುವಕರು ದುಶ್ಚಟಕ್ಕೆ ಬಲಿಯಾಗದಿರಿ. ಕಿನ್ನಾಳ ಗ್ರಾಮದ ಯುವಕರಂತೆ ಮಾದರಿಯಾಗಿರಬೇಕೆಂದು ಜಿಲ್ಲಾ ನ್ಯಾಯಾಧೀಶ ಚಂದ್ರಶೇಖರ ಸಿ. ಸಲಹೆ ನೀಡಿದರು.
ತಾಲೂಕಿನ ಕಿನ್ನಾಳ ಗ್ರಾಮದಲ್ಲಿ ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದಿಂದ ಹಮ್ಮಿಕೊಂಡಿದ್ದ ಪೀಠೋಪಕರಣ ವಿತರಣೆ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.
ಪಾಲಕರು ಮಕ್ಕಳ ಬಗ್ಗೆ ಕಾಳಜಿವಹಿಸಿ. ಕಿನ್ನಾಳ ಯುವಕರ ಒಂದು ನಿರ್ಧಾರದಿಂದ ಇಡೀ ಗ್ರಾಮದ ಚಿತ್ರಣ ಬದಲಾಗಿದೆ. ವಿವಿಧ ಇಲಾಖೆಗಳ ಸಹಯೋಗದಲ್ಲಿ ಸಾರ್ವಜನಿಕರಿಗೆ ಅನುಕೂಲವಾಗುವ ಅದಾಲತ್ ಮಾಡಲಾಗಿದೆ. ಗ್ರಾಮ ಅಭಿವೃದ್ಧಿಯತ್ತ ಸಾಗುತ್ತಿದೆ. ಕೆಲವೇ ದಿನದಲ್ಲಿ ಕೊಪ್ಪಳ ಜಿಲ್ಲೆಗೆ ಮಾದರಿ ಗ್ರಾಮವಾಗಲಿದೆ. ಅಂಗನವಾಡಿಗಳಿಗೆ ಪೀಠೋಪಕರಣ ಅವಶ್ಯವೆಂದು ತಿಳಿಸಿದರು. ಸಿಎಸ್ಆರ್ ನಿಧಿಯಡಿ ಅವುಗಳನ್ನು ಒದಗಿಸಲಾಗಿದೆ ಎಂದರು.
ಜಿಲ್ಲಾಧಿಕಾರಿ ಡಾ.ಸುರೇಶ ಬಿ.ಇಟ್ನಾಳ ಮಾತನಾಡಿ, ಅಭಿವೃದ್ಧಿ ಕೇವಲ ಅಧಿಕಾರಿಗಳಿಂದ ಸಾಧ್ಯವಿಲ್ಲ. ಗ್ರಾಮಸ್ಥರು, ಯುವಕರು ಎಲ್ಲರ ಸಹಕಾರ ಅಗತ್ಯ. ನ್ಯಾಯಾಧೀಶರು ಕಿನ್ನಾಳದಂತೆ ಇತರ ಗ್ರಾಮಗಳನ್ನೂ ದತ್ತು ಪಡೆದು ಅಭಿವೃದ್ಧಿ ಮಾಡಲಿ ಎಂದರು.
ಜಿಪಂ ಸಿಇಒ ವರ್ಣಿತ್ ನೇಗಿ ಮಾತನಾಡಿ, ಗ್ರಾಮಕ್ಕೆ ಬೇಕಾದ ಕಾಮಗಾರಿಗಳನ್ನು ಮಂಜೂರು ಮಾಡಲಾಗುವುದು. ನರೇಗಾಡಿ ಚರಂಡಿ, ಸಿಸಿ ರಸ್ತೆ, ಶಾಲಾಭಿವೃದ್ಧಿಗಾಗಿ 1.55 ಕೋಟಿ ರೂ. ಯೋಜನೆ ಅನುಮೋದಿಸಿದೆ ಎಂದರು.
12 ಅಂಗನವಾಡಿ ಕೇಂದ್ರಗಳಿಗೆ, ಎಲ್ಕೆಜಿ, ಯುಕೆಜಿ ಮಕ್ಕಳಿಗೆ ಶಾಲಾ ಪೀಠೋಪಕರಣ ವಿತರಿಸಲಾಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಮಹಾಂತೇಶ ಎಸ್.ದರಗದ, ಪಿಡೊ ಪರಮೇಶ್ವರಯ್ಯ ತೆಳಗಡೆಮಠ, ಗ್ರಾಪಂ ಅಧ್ಯೆ ಶ್ವೇತಾ ಡಂಬಳ, ಉಪಾಧ್ಯಕ್ಷ ದುರಗಪ್ಪ ಡಂಬರ, ಪರಿಸರ ಅಧಿಕಾರಿ ಹರಿಶಂಕರ್, ತಾಪಂ ಇಒ ದುಂಡಪ್ಪ ತುರಾದಿ, ಸಿಡಿಪಿಒ ರೋಹಿಣಿ ಕೊಟಗಾರ ಇತರರಿದ್ದರು.