ಕೊಪ್ಪಳ: ಲೈನ್ಮನ್ ಮೃತಪಟ್ಟ ಪ್ರಕರಣಕ್ಕೆ ಸಂಬಂಧಿಸಿದಂತೆ ಅಪರಾಧಿಗೆ ಎರಡು ವರ್ಷ ಸಾದಾ ಜೈಲು ಶಿಕ್ಷೆ ಹಾಗೂ 10 ಸಾವಿರ ರೂ.ದಂಡ ವಿಧಿಸಿ ಸಿಜೆಎಂ ನ್ಯಾಯಾಲಯ ಆದೇಶಿಸಿದೆ.
ಭಾಗ್ಯನರಗದ ಜೆಸಿಬಿ ಮಾಲೀಕ/ಚಾಲಕ ಕುಮಾರಸ್ವಾಮಿ ಬಿ. ಶಿೆಗೆ ಗುರಿಯಾದಾತ. 2018ರ ಆಗಸ್ಟ್ 2ರಂದು ಗವಿಮಠ ರಸ್ತೆ ಅಗಲೀಕರಣ ಮಾಡುವಾಗ ವಿದ್ಯುತ್ ಕಂಬ ಸ್ಥಳಾಂತರ ನಡೆದಿತ್ತು. ಈ ವೇಳೆ ಕುಮಾರಸ್ವಾಮಿ ಜೆಸಿಬಿ ಚಲಾಯಿಸುತ್ತಿದ್ದಾಗ ವಿದ್ಯುತ್ಕಂಬಕ್ಕೆ ಕಟ್ಟಿದ ಸರಪಳಿ ತುಂಡಾಗಿದೆ. ಪಕ್ಕದಲ್ಲಿ ನಿಂತಿದ್ದ ಲೈನ್ಮನ್ ನಿಂಗಪ್ಪ ಮಾದರ ತಲೆ ಮೇಲೆ ಕಂಬ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೃತನ ಹೆಂಡತಿ ಮರಿಯಮ್ಮ ನೀಡಿದ ದೂರಿನಂತೆ ನಗರಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಪಿಎಸ್ಐ ಕೀರಮ್ಮ ತನಿಖೆ ನಡೆಸಿ ನ್ಯಾಯಾಲಯಕ್ಕೆ ದೋಷಾರೋಪಣೆ ಪಟ್ಟಿ ಸಲ್ಲಿಸಿದ್ದರು.
ವಿಚಾರಣೆ ನಡೆಸಿದ ಸಿಜೆಎಂ ನ್ಯಾಯಾಲಯದ ಮುಖ್ಯ ನ್ಯಾಯಿಕ ದಂಡಾಧಿಕಾರಿ ಮಲ್ಕಾರಿ ರಾಮಪ್ಪ ಒಡೆಯರ್ ಅವರು ಆರೋಪಿತನ ದೋಷಿ ಎಂದು ಪರಿಗಣಿಸಿದ್ದು, ಕುಮಾರಸ್ವಾಮಿ ಅಪರಾಧಿಯೆಂದು ಘೋಷಿಸಿದ್ದಾರೆ. ಎರಡು ವರ್ಷ ಸಾದಾ ಜೈಲು ಶಿಕ್ಷೆ ಮತ್ತು 10 ಸಾವಿರ ರೂ. ದಂಡ ವಿಧಿಸಿ ಬುಧವಾರ ಆದೇಶಿಸಿದ್ದಾರೆ. ಸರ್ಕಾರದ ಪರವಾಗಿ ಹಿರಿಯ ಸಹಾಯಕ ಸರ್ಕಾರಿ ಅಭಿಯೋಜಕ ವಸಂತ ವಾದ ಮಂಡಿಸಿದ್ದಾರೆ. ನಗರಠಾಣೆ ಸಿಬ್ಬಂದಿ ಲತೀಪ್ ಪಾಷಾ, ಗವಿಸಿದ್ದಪ್ಪ, ಮಂಜುನಾಥ ಕಡಗತ್ತಿ ಸಾದಾರರನ್ನು ಹಾಜರುಪಡಿಸಿ ಸಹಕರಿಸಿದ್ದಾಗಿ ಸರ್ಕಾರಿ ಅಭಿಯೋಜಕರ ಕಚೇರಿ ತಿಳಿಸಿದೆ.