ಶಹಾಪುರದಲ್ಲಿ 24 ತಾಸು ಕುಡಿವ ನೀರು-ಸಂಸದ ರಾಜಶೇಖರ ಹಿಟ್ನಾಳ ಹೇಳಿಕೆ

District Koppal JJM MP Rajashekhar hitnal shahapur
Published on

ಕೊಪ್ಪಳ: ಶಹಾಪುರ ಗ್ರಾಮವು ದಿನದ 24ಗಂಟೆಯೂ ಕುಡಿವ ನೀರು ಸರಬರಾಜು ವ್ಯವಸ್ಥೆಯನ್ನು ಹೊಂದಿದೆ ಎಂದು ಸಂಸದ ರಾಜಶೇಖರ ಹಿಟ್ನಾಳ ಹೇಳಿದರು.

ತಾಲೂಕಿನ ಶಹಾಪುರದಲ್ಲಿ ಬುಧವಾರ ಆಯೋಜಿಸಿದ್ದ 24*7 ಕುಡಿವ ನೀರು ಸರಬರಾಜು ಗ್ರಾಮ ಘೋಷಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.

ಜಿಲ್ಲೆಯಲ್ಲಿ 700 ಗ್ರಾಮಗಳಲ್ಲಿ ಜೆಜೆಎಂ ಕಾಮಗಾರಿ ಮಾಡಲಾಗಿದೆ. ಎಲ್ಲ ಕಾಮಗಾರಿಗಳು ಅಸಮರ್ಪಕವಾಗಿವೆ ಎಂಬ ಕೂಗು ಕೇಳಿ ಬರುತ್ತಿದ್ದವು. ಈ ಸಮಸ್ಯೆಗಳನ್ನು ಹೋಗಲಾಡಿಸಲು ವಿಶೇಷ ಕ್ರಮ ಕೈಗೊಂಡು ಪ್ರತಿ ಗ್ರಾಮದಲ್ಲಿ ಯೋಜನೆ ಸಮರ್ಪಕವಾಗಿ ಅನುಷ್ಠಾನಗೊಳಸಲಾಗುತ್ತಿದೆ. ಎಲ್ಲ ಗ್ರಾಮಗಳಲ್ಲಿ 24 ತಾಸು ನೀರು ಸರಬರಾಜು ಮಾಡಬೇಕಾಗಿದ್ದು, ಸಂಬಂಧಿಸಿದ ಅಧಿಕಾರಿಗಳು ಜೆಜೆಎಂ ಕಾಮಗಾರಿಗಳನ್ನು ಗುಣಮಟ್ಟದ ಜತೆಗೆ ತ್ವರಿತವಾಗಿ ಪೂರ್ಣಗೊಳಿಸಲು ಮೊದಲ ಆದ್ಯತೆ ನೀಡಬೇಕು. ಪ್ರತಿ ವಾರದಲ್ಲಿ ಒಂದು ಗ್ರಾಮವನ್ನು 24*7 ಗ್ರಾಮ ಎಂದು ಘೋಷಣೆ ಮಾಡಲು ಕ್ರಮ ವಹಿಸಬೇಕು. ನೀರು ಮಿತವಾಗಿ ಬಳಸಬೇಕು ಹಾಗೂ ಈ ವ್ಯವಸ್ಥೆ ಸೂಕ್ತವಾಗಿ ನಿರ್ವಹಿಸುವಂತೆ ಸೂಚಿಸಿದರು.

ವಿಧಾನ ಪರಿಷತ್​ ಸದಸ್ಯೆ ಹೇಮಲತಾ ನಾಯಕ ಮಾತನಾಡಿ, 24*7 ನೀರು ಸರಬರಾಜು ಗ್ರಾಮ ಎಂದು ಘೋಷಿಸಲಾದ ಗ್ರಾಮದಲ್ಲಿ ನೀರು ಪೋಲಾಗದಂತೆ ನಿವಾಸಿಗಳು ನೋಡಿಕೊಳ್ಳಬೇಕು. ನೀರು ಅವಶ್ಯ ಸಂಪನ್ಮೂಲವಾಗಿದ್ದು, ಮಿತವಾಗಿ ಬಳಸಿಕೊಳ್ಳಬೇಕು. ಪ್ರತಿ ಮನೆಗೆ ಕಡ್ಡಾಯವಾಗಿ ಶೌಚಗೃಹ ಬಳಸಿಕೊಳ್ಳಬೇಕು. ಗ್ರಾಮದ ಸ್ವಚ್ಛತೆಗೂ ಹೆಚ್ಚಿನ ಗಮನ ನೀಡಬೇಕು ಎಂದರು.

ಗ್ರಾಪಂ ಅಧ್ಯೆ ತಿಪ್ಪವ್ವ ಶಿವಪ್ಪ ನಾಯಕ, ಉಪಾಧ್ಯಕ್ಷ ಮುರಳಿಧರ ಬಸಿರಾಳ, ಜಿ.ಪಂ ಉಪ ಕಾರ್ಯದರ್ಶಿ ಮಲ್ಲಿಕಾರ್ಜುನ ತೊದಲಬಾಗಿ, ಆರ್​ಡಿಪಿಆರ್​ ಕಾರ್ಯಪಾಲಕ ಅಭಿಯಂತರ ಮಹೇಶ್​ ಶಾಸ್ತ್ರೀ, ತಾಪಂ ಇಒ ದುಂಡಪ್ಪ ತುರಾದಿ, ಸಹಾಯಕ ಕಾರ್ಯಪಾಲಕ ಅಭಿಯಂತರ ವಿಲಾಸ್​ರಾವ್​ ಬೋಸ್ಲೆ, ಪಿಡಿಇಒ ಗೀತಾಕುಮಾರಿ ಧುತ್ತರಗಿ, ಡಿಪಿಎಂ ಶರಣು, ಬೆಂಗಳೂರ ಫೀಡ್​ ಬ್ಯಾಕ್​ ಫೌಂಡೇಷನ್​ ರಾಜ್ಯ ಸಂಯೋಜಕ ಡಾ.ನಂದಕುಮಾರ, ಸಿಬ್ಬಂದಿ ಓಂಕಾರ, ರವಿಚಂದ್ರ ಹಾಗೂ ಶಶಿಕುಮಾರ ಇತರರಿದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net