ಜೆಡಿಎಸ್​ ಸತ್ಯಯಾತ್ರೆ ಆ.31ಕ್ಕೆ

Published on

ಕೊಪ್ಪಳ: ಧರ್ಮಸ್ಥಳ ಕ್ಷೇತ್ರ ಬಗೆಗಿನ ಅಪಪ್ರಚಾರ ಖಂಡಿಸಿ ಜೆಡಿಎಸ್​ ಪಕ್ಷದಿಂದ ನಾಳೆ ಧರ್ಮಸ್ಥಳ ಸತ್ಯಯಾತ್ರೆ ಹಮ್ಮಿಕೊಳ್ಳಲಾಗಿದೆ. ಕೊಪ್ಪಳದಿಂದ ನೂರಾರು ಕಾರ್ಯಕರ್ತರು, ಮುಖಂಡರು ತೆರಳುತ್ತೇವೆಂದು ಜೆಡಿಎಸ್​ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಶರಣಪ್ಪ ಜಡಿ ತಿಳಿಸಿದರು.

ನಗರದಲ್ಲಿ ಶುಕ್ರವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿ, ಧರ್ಮಸ್ಥಳ ಪವಿತ್ರ ಕ್ಷೇತ್ರ. ಹಿಂದುಗಳ ಧಾರ್ಮಿಕ ಕ್ಷೇತ್ರ. ಅದರ ಬಗ್ಗೆ ಹಾಗೂ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆ ಅವರ ಬಗ್ಗೆ ಅಪ ಪ್ರಚಾರ ಮಾಡಲಾಗಿದೆ. ಮಾಸ್ಕ್​ ಧರಿಸಿದ ವ್ಯಕ್ತಿ ಮೂಲಕ ನೂರಾರು ಜನರನ್ನು ಹತ್ಯೆ ಮಾಡಲಾಗಿದೆ ಎಂದು ಸುಳ್ಳು ಹೇಳಿಸಿದರು. ಅನೇಕರು ಅಪ ಪ್ರಚಾರ ಮಾಡಿದರು. ಆದರೆ, ಸತ್ಯ ಈಗ ಹೊರ ಬಿದ್ದಿದೆ. ಸುಳ್ಳುಗಾರರು ಎಲ್ಲರೂ ಸೇರಿ ವ್ಯವಸ್ಥಿತವಾಗಿ ಕ್ಷೇತ್ರದ ಹೆಸರು ಕೆಡಿಸಲು ಮಾಡಿದ ಸಂಚು ಬಯಲಾಗಿದೆ ಎಂದರು.

ಧರ್ಮಸ್ಥಳಕ್ಕೆ ನ್ಯಾಯ ಕೋರಿ ಜೆಡಿಎಸ್​ನಿಂದ ಆ.31ರಂದು ಧರ್ಮಸ್ಥಳದಲ್ಲಿ ಸತ್ಯಯಾತ್ರೆ ಹಮ್ಮಿಕೊಂಡಿದ್ದೇವೆ. ರಾಜ್ಯಾದ್ಯಂತ ಎಲ್ಲ ಜಿಲ್ಲೆಗಳಿಂದ ಸಾವಿರಾರು ಕಾರ್ಯಕರ್ತರು ಆಗಮಿಸುತ್ತಿದ್ದಾರೆ. ಕೊಪ್ಪಳದಿಂದ ರಾಜ್ಯ ಕೋರ್​ ಕಮಿಟಿ ಸದಸ್ಯ ಸಿ.ವಿ.ಚಂದ್ರಶೇಖರ, ಜಿಲ್ಲಾಧ್ಯಕ್ಷ ಸುರೇಶ ಭೂಮರಡ್ಡಿ, ರಾಜ್ಯ ಕಾರ್ಯದರ್ಶಿ ವೀರೇಶ ಮಹಾಂತಯ್ಯನಮಠ, ರಾಜ್ಯ ಯುವ ಟಕ ಕಾರ್ಯಾಧ್ಯಕ್ಷ ರಾಜು ನಾಯಕ ಇನ್ನಿತರರು ಸೇರಿ ನೂರಾರು ಕಾರ್ಯಕರ್ತರು ತೆರಳುತ್ತೇವೆಂದು ತಿಳಿಸಿದರು.

ಪಕ್ಷದ ಪದಾಧಿಕಾರಿಗಳಾದ ವೀರೇಶ ಗೌಡರ್​, ಸೋಮನಗೌಡ ಯರದಿಹಾಳ, ಕರಿಯಪ್ಪ ನಾಮಧಾರಿ, ಮಂಜುನಾಥ ಸೊರಟೂರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net