

ಕೊಪ್ಪಳ: ನಗರದ ಶ್ರೀ ರಾವೇಂದ್ರ ಸ್ವಾಮಿಗಳ ಮಠದಲ್ಲಿ ಜಯತೀರ್ಥರ (ಟೀಕಾರಾಯರ) ಆರಾಧನಾ ಮಹೋತ್ಸವ ಸಂಪನ್ನವಾಗಿ ನೆರವೇರಿತು.
ಬೆಳಗ್ಗೆಯಿಂದಲೇ ಅಪಾರ ಭಕ್ತರು ದೇವಸ್ಥಾನಕ್ಕೆ ಆಗಮಿಸ ರಾಯರ ಬೃಂದಾವನ ದರ್ಶನ ಪಡೆದರು. ಬಗೆ ಬಗೆ ಹೂಗಳಿಂದ ಬೃಂದಾವನ ಅಲಂಕರಿಸಲಾಯಿತು. ಸುಪ್ರಭಾತ, ಜಯತೀರ್ಥ ಸ್ತುತಿ ಪಾರಾಯಣ, ಅಷ್ಟೊತ್ತರ, ಪಂಚಾಮೃತ ಅಭಿಷೇಕ, ನೈವೇದ್ಯ, ಹಸ್ತೋದಕ ಅಲಂಕಾರ, ತೀರ್ಥ, ಪ್ರಸಾದ ವಿತರಿಸಲಾಯಿತು. ಮಠದ ಪ್ರಧಾನ ಅರ್ಚಕ ಪಂಡಿತ್ ರಘುಪ್ರೇಮಾಚಾರ್ ಮುಳಗುಂದ ಧಾರ್ಮಿಕ ವಿಧಿ ವಿಧಾನ ನೆರವೇರಿಸಿದರು.
ಮಧ್ಯಾಹ್ನ ರಥೋತ್ಸವ ಸಂಭ್ರಮದಿಂದ ಜರುಗಿತು. ಸಂಜೆ ಪಂಡಿತ್ ಹನುಮೇಶಚಾರ್ಯ ಗಂಗೂರ್ ಅವರಿಂದ ಉಪನ್ಯಾಸ ಮತ್ತು ಆಕಾಶವಾಣಿ ಕಲಾವಿದೆ ಕಲಬುರಗಿಯ ಶ್ರುತಿ ವಿಜಯೀಂದ್ರ ಸಗರ ಭಕ್ತಿ ಸಂಗೀತ ಕಾರ್ಯಕ್ರಮ ನೆರೆದವರನ್ನು ಸೆಳೆದವು. ರಾತ್ರಿವರೆಗೂ ಮಠದಂಗಳದಲ್ಲಿ ಭಕ್ತರು ಕಂಡುಬಂದರು. ಮಠದ ವ್ಯವಸ್ಥಾಪಕ ಜಗನ್ನಾಥ ಹುನುಗುಂದ ಸೇರಿ ಪ್ರಮುಖರು ಭಾಗಿಯಾಗಿದ್ದರು.