ಡಿಕೆಶಿ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪು ನಡೆ : ಜನಾರ್ದನ ರೆಡ್ಡಿ ಕಿಡಿ

janardhana reddy cm siddaramayya congress dk shivakumar cbi
Published on

ಕೊಪ್ಪಳ: ಡಿಸಿಎಂ ಡಿ.ಕೆ.ಶಿವಕುಮಾರ್​ ವಿರುದ್ಧ ಸಿಬಿಐಗೆ ನೀಡಿದ್ದ ಪ್ರಕರಣಗಳನ್ನು ವಾಪಸ್​ ಪಡೆಯುವ ವಿಷಯದಲ್ಲಿ ಸಿಎಂ ಸಿದ್ದರಾಮಯ್ಯ ತಪ್ಪುಮಾಡುತ್ತಿದ್ದಾರೆ. ಯಾವುದೇ ತಪ್ಪು ಮಾಡಿರದಲಿದ್ದಲ್ಲಿ ಪ್ರಕರಣ ಹಿಂಪಡೆಯುವುದು ಯಾಕೆ ಎಂದು ಗಂಗಾವತಿ ಶಾಸಕ ಗಾಲಿ ಜನಾರ್ದನರೆಡ್ಡಿ ಪ್ರಶ್ನಿಸಿದರು.

ಬಿ.ಎಸ್​.ಯಡಿಯೂರಪ್ಪ ದ್ವೇಷ ರಾಜಕಾರಣಕ್ಕಾಗಿ ಡಿಕೆಶಿ ಪ್ರಕರಗಳನ್ನು ಸಿಬಿಐಗೆ ನೀಡಿದ್ದರೆಂದು ಸಮರ್ಥನೆ ಮಾಡಿಕೊಳ್ಳುತ್ತಿದ್ದಾರೆ. ಹಾಗಾದರೆ, ಈ ಹಿಂದೆ ನನ್ನ ವಿರುದ್ಧ ಗಣಿ ಹಗರ ಪ್ರಕರಣಗಳನ್ನು ದ್ವೇಷ ರಾಜಕೀಯಕ್ಕಾಗಿ ಸಿಬಿಐಗೆ ನೀಡಿದರೆ ? ಸಚಿವ ನಾಗೇಂದ್ರ ವಿರುದ್ಧವೂ ಪ್ರಕರಣಗಳಿವೆ. ಹಾಗಾದರೆ ಅವರಿಗೆ ಸಂಪುಟದಲ್ಲಿ ಸ್ಥಾನ ನೀಡಿದ್ದು ಯಾಕೆ, ಅವರ ಪ್ರಕರಣಗಳನ್ನು ವಾಪಸ್​ ಪಡೆಯುತ್ತಾರಾ, ಅವರನ್ನು ಮಂತ್ರಿ ಸ್ಥಾನದಿಂದ ಇಳಿಸುತ್ತಾರಾ, ಡಿಕೆಶಿ ಪ್ರಾಮಾಣಿಕ ಆಗಿದ್ದರೆ ಕೇಸ್​ ವಾಪಸ್​ ಪಡೆಯುವ ಅವಶ್ಯಕತೆ ಇರುತ್ತಿರಲಿಲ್ಲ ಎಂದು ಮಂಗಳವಾರ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಕರೆ ಮಾಡಿ ಬೆಂಬಲ ನೀಡುವಂತೆ ಮನವಿ ಮಾಡಿದ್ದು ನಿಜ. ನಾನು ವೈಯಕ್ತಿಕವಾಗಿ ಅವರಿಗೆ ಶುಭಾಶಯ ತಿಳಿಸಿರುವೆ. ಆದರೆ, ಬೆಂಬಲ ನೀಡುವುದಾಗಿ ಹೇಳಿಲ್ಲ. ನನ್ನ ಕೊನೇ ಉಸಿರಿರುವವರೆಗೆ ಕೆಆರ್​ಪಿಪಿ ಬಿಡುವುದಿಲ್ಲ. ಅನ್ಯ ಪಕ್ಷ ಸೇರುವುದಿಲ್ಲ. ಲೋಕಸಭೆ ಚುನಾವಣೆಯಲ್ಲೂ 8 ಕ್ಷೇತ್ರಗಳಲ್ಲಿ ನಮ್ಮ ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ಯೋಜನೆ ಇದೆ. ಯಾವ ಕ್ಷೇತ್ರದಲ್ಲೂ ಇನ್ನೊಂದು ಪಕ್ಷ ಬೆಂಬಲಿಸುವುದಿಲ್ಲವೆಂದು ಸ್ಪಷ್ಟನೆ ನೀಡಿದರು.

ಪ್ರಧಾನಿ ನರೇಂದ್ರ ಮೋದಿ ಚುನಾವಣೆ ಬಂದಾಗ ಅಂಜನಾದ್ರಿ, ರಾಮಾಯಣ, ಹಿಂದುತ್ವ ಎಂದೆಲ್ಲ ಮಾತನಾಡತ್ತಾರೆ. ಇವರಿಗೆ ನಿಜವಾದ ಕಾಳಜಿ ಇಲ್ಲ. ಕೇಲವ ಅಯೋಧ್ಯೆಯಿಂದ ಅಂಜನಾದ್ರಿಗೆ ರೈಲು ಬಿಡುವ ಮಾತಾಡುತ್ತಾರೆ. ಕ್ಷೇತ್ರ ಅಭಿವೃದ್ಧಿಗೆ 5 ಸಾವಿರ ಕೋಟಿ ರೂ. ಯೋಜನೆ ರೂಪಿಸಲಾಗಿದೆ. ಅದಕ್ಕೆ ಅನುದಾನ ಬಿಡುಗಡೆ ಮಾಡಬೇಕು.

ಸಜ್ಜನ ರಾಜಕಾರಣಿ ಎಂದು ಹೆಸರಾಗಿರುವ ಕೊಪ್ಪಳ ಸಂಸದ ಸಂಗಣ್ಣ ಕರಡಿ ಬರುವ ಬಜೆಟ್​ ಅಧಿವೇಶನದಲ್ಲಿ ಅಂಜನಾದ್ರಿ ಅಭಿವೃದ್ಧಿಗೆ ಅನುದಾನ ಬಿಡುಗಡೆ ಮಾಡಿಸಿಕೊಂಡು ಬರಲಿ ಎಂದು ಸವಾಲು ಹಾಕಿದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net