

ಕೊಪ್ಪಳ: ಅಧಿಕಾರಿಗಳು ನಿಮ್ಮ ಇಲಾಖೆಯಲ್ಲಿ ಮಾಹಿತಿ ಹಕ್ಕು ಕಾಯ್ದೆ ಸಮರ್ಪಕ ಅನುಷ್ಠಾನಗೊಳಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ನಗರದ ಜಿಲ್ಲಾಡಳಿತ ಭವನದ ಆಡಿಟೋರಿಯಂ ಹಾಲ್ನಲ್ಲಿ ಜಿಲ್ಲಾ ಮಟ್ಟದ ಅಧಿಕಾರಿಗಳು, ವಿಷಯ ನಿರ್ವಾಹಕರಿಗೆ ಮಾಹಿತಿ ಹಕ್ಕು ಕಾಯ್ದೆ ಕುರಿತು ಶುಕ್ರವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.
ಆಡಳಿತದಲ್ಲಿ ಪಾರದರ್ಶಕತೆ ಮತ್ತು ಉತ್ತರದಾಯಿ ಉದ್ದೇಶಕ್ಕಾಗಿ ಮಾಹಿತಿ ಹಕ್ಕು ಜಾರಿ ಮಾಡಿದೆ. ಕಾಯ್ದೆಯಡಿ ಸ್ವೀಕಾರ ಆಗುವ ಅರ್ಜಿಗಳಿಗೆ ಸರಿಯಾದ ಮಾಹಿತಿ ನೀಡಿ. ಯಾವುದೇ ಗೊಂದಲ ಮಾಡಿಕೊಳ್ಳಬೇಡಿ. ವಿಲೇವಾರಿಯಲ್ಲಿ ತೊಂದರೆ ಮಾಡಿಕೊಂಡರೆ ವಿಳಂಬವಾಗುತ್ತದೆ. ಕಾಯ್ದೆ ಬಗ್ಗೆ ಮೊದಲು ಸರಿಯಾಗಿ ಅರ್ಥೈಸಿಕೊಳ್ಳಿ. ನಿಯಮಾನುಸಾರ ಮಹಿತಿ ನೀಡಿ. ಅನಗತ್ಯ ವಿಳಂಬ ಬೇಡ. ಅವಧಿಯೊಳಗೆ ಮಾಹಿತಿ ಅಥವಾ ಹಿಂಬರಹ ನೀಡಿ. ಯಾಬ ಮಾಹಿತಿ ಕೊಡಬೇಕು, ಕೊಡಬಾರದೆಂದು ನ್ಯಾಯಾಲಯಗಳು ಹಲವು ಆದೇಶ ಹೊರಡಿಸಿವೆ. ಸರ್ಕಾರ ಸಹ ಸುತ್ತೋಲೆ ನೀಡಿದೆ. ಈ ಬಗ್ಗೆ ಮಾಹಿತಿ ಪಡೆದುಕೊಳ್ಳಿ ಎಂದರು.
ಕಾಯ್ದೆಯಡಿ ಸರ್ಕಾರಿ ನೌಕರರ ವೈಯಕ್ತಿಕ ಮಾಹಿತಿ ನೀಡುವಂತಿಲ್ಲ. ಯಾವ ಮಾಹಿತಿ ನೀಡಬಹುದೆಂಬ ಬಗ್ಗೆ ನಿಮ್ಮ ಇಲಾಖೆ ವೆಬ್ಸೈಟ್ಗಳಲ್ಲಿ ಮಾಹಿತಿ ಒದಗಿಸಿ. ಇದರಿಂದ ಅರ್ಜಿ ಸಲ್ಲಿಸುವವರಿಗೂ ಅನುಕೂಲವಾಗಲಿದೆ. ಕಾಯ್ದೆ ಬಗ್ಗೆ ಅರಿವು ಮೂಡಿಸಲು ಕಾರ್ಯಾಗಾರ ಹಮ್ಮಿಕೊಳ್ಳಲಾಗಿದೆ. ಎಲ್ಲರು ಇದರ ಸದುಪಯೋಗ ಪಡೆಯಿರಿ ಎಂದು ಸಲಹೆ ನೀಡಿದರು.
ಬೆಳಗಾವಿ ಹಿರಿಯ ವಕೀಲ ಅಶೋಕ ಹಲಗಲಿ ತರಬೇತಿ ನೀಡಿದರು. ಎಡಿಸಿ ಸಿದ್ರಾಮೇಶ್ವರ, ಜಿಲ್ಲಾ ತರಬೇತಿ ಸಂಸ್ಥೆ ಪ್ರಾಚಾರ್ಯ ಕೃಷ್ಣಮೂರ್ತಿ ದೇಸಾಯಿ ಇತರರಿದ್ದರು.