

ಕೊಪ್ಪಳ: ಪ್ರವಾದಿ ಮೊಹ್ಮದ್ ಪೈಗಂಬರ್ ಜನ್ಮ ದಿನ ಅಂಗವಾಗಿ ನಗರ ಸೇರಿ ಗ್ರಾಮೀಣ ಭಾಗಗಳಲ್ಲಿ ಶುಕ್ರವಾರ ಸಂಭ್ರಮದ ಈದ್ ಹಬ್ಬ ಆಚರಿಸಲಾಯಿತು.
ಗುರುವಾರದಿಂದಲೇ ಸಂಭ್ರಮ ಮನೆ ಮಾಡಿದ್ದು, ಮಸೀದಿಗಳಲ್ಲಿ ಜಾಗರಣೆ, ಸಾಮೂಹಿಕ ಪ್ರಾರ್ಥನೆ ನಡೆದವು. ಸಾರ್ವಜನಿಕರು ಶ್ರದ್ಧಾಭಕ್ತಿಯಿಂದ ಅಲ್ಲಾಹುವಿಗೆ ನಮಿಸಿದರು. ಶುಕ್ರವಾರ ಬೆಳಗ್ಗೆ ಗಡಿಯಾರ ಕಂಬ ವೃತ್ತ, ಶಾರದಾ ಚಿತ್ರಮಂದಿರ, ಸಾಲಾರಜಂಗ್ ರಸ್ತೆ, ಅಶೋಕ ವೃತ್ತ, ಜವಾಹರ ರಸ್ತೆ ಮೂಲಕ ಯೂಸೂಫಿಯಾ ಮಸೀದಿವರೆಗೆ ಶಾಂತಿಯುತ ಮೆರವಣಿಗೆ ನಡೆಯಿತು.
ಹಿರಿಯರು, ಮಕ್ಕಳು ಮೆರವಣಿಗೆಯಲ್ಲಿ ಪಾಲ್ಗೊಂಡರು ಮೆರಗು ತಂದರು. ಇಸ್ಲಾಂ ಧರ್ಮದ ಬಾವುಟ, ಮೆಕ್ಕಾ, ಮದಿನಾ ಸ್ಥಬ್ಧ ಚಿತ್ರ ನೋಡುಗರನ್ನು ಸೆಳೆದವು. ಜವಾಹರ್ ರಸ್ತೆಯಲ್ಲಿ ಕೊಪ್ಪಳ ಕಾ ಸರ್ಕಾರ ಗಣೇಶನಿಗೆ ಮುಸ್ಲಿಮರು ಹಾರ ಹಾಕಿ ನಮಿಸಿದರು. ಹಿಂದುಗಳು ಸಿಹಿ ಹಾಗೂ ಅನ್ನ ಸಂತರ್ಪಣೆ ಮೂಲಕ ಪರಸ್ಪರ ಭಾವೈಕ್ಯತೆ ಮೆರೆದರು. ಸಂಸದ ರಾಜಶೇಖರ ಹಿಟ್ನಾಳ್ ಸೇರಿ ಇತರ ಗಣ್ಯರು ಭಾಗಿಯಾದರು.