ವಿಜಯನಗರ ಕಾಲುವೆಗಳಿಗೆ ನೀರು ಜ.22ರಿಂದ

ICC MEETING TB DAM WATER RELEASE VIJAYANAGARA CANALS MINISTER SHIVARAJ TANGADAGI
ಬೆಂಗಳೂರಿನಲ್ಲಿ ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ 120ನೇ ತುಂಗಭದ್ರಾ ಯೋಜನೆ ಐಸಿಸಿ ಸಭೆ ಜರುಗಿತು. ಸಚಿವರಾದ ಜಮೀರ್​ ಅಹಮದ್​ ಖಾನ್​, ಎನ್​.ಎಸ್​.ಬೋಸರಾಜು, ಬಿ.ನಾಗೇಂದ್ರ, ಶಾಸಕರಾದ ರಾವೇಂದ್ರ ಹಿಟ್ನಾಳ್​, ಗಾಲಿ ಜನಾರ್ದನ ರೆಡ್ಡಿ ಇದ್ದರು.
Published on

ಕೊಪ್ಪಳ: ತಾಲೂಕಿನ ಮುನಿರಾಬಾದ್​ ತುಂಗಭದ್ರಾ ಜಲಾಶಯದಿಂದ ವಿಜಯನಗರ ಕಾಲುವೆಗಳಿಗೆ ಜ.22ರಿಂದ ನೀರು ಹರಿಸಲು ನೀರಾವರಿ ಸಲಹಾ ಸಮಿತಿ ಅಧ್ಯಕ್ಷ, ಸಚಿವ ಶಿವರಾಜ ತಂಗಡಗಿ ಅಧ್ಯಕ್ಷತೆಯಲ್ಲಿ ಶುಕ್ರವಾರ ಬೆಂಗಳೂರಿನಲ್ಲಿ ನಡೆದ ಸಭೆಯಲ್ಲಿ ತೀರ್ಮಾನಿಸಲಾಯಿತು.

ಕುಡಿವ ನೀರಿಗೆ ಕಾಯ್ದಿರಿಸಿದ 0.500 ಟಿಎಂಸಿ ಅಡಿ ಪೈಕಿ 0.300 ನೀರನ್ನು ತುಂಗಭದ್ರಾ ಎಡದಂಡೆ ಮುಖ್ಯ ಕಾಲುವೆಗೆ ಜ. 22ರಿಂದ ಏ.30 ವರೆಗೆ 60 ಕ್ಯೂಸೆಕ್​ ಆನ್​/ಆಫ್​ನಂತೆ (ಕುಡಿವ ನೀರು ಒಳಗೊಂಡು)ಹರಿಸಲಾಗುವುದು. ರಾಯಚೂರು ಜಿಲ್ಲೆಗೆ ಹಂಚಿಕೆಯಾದ 1.200 ಟಿಎಂಸಿ ಅಡಿ ನೀರನಲ್ಲಿ ಫೆ.15ರಿಂದ 20 ವರೆಗೆ 0.600 ಟಿಎಂಸಿ ಮತ್ತು ಏ.10ರಿಂದ 20ರವರೆಗೆ 700 ಕ್ಯುಸೆಕ್​ನಂತೆ 0.600 ಟಿಎಂಸಿ ನೀರು ಕುಡಿವ ಸಲುವಾಗಿ ಹರಿಸಲು ನಿರ್ಧರಿಸಲಾಯತು.

ತುಂಗಭದ್ರಾ ಬಲದಂಡೆ ಕೆಳಮಟ್ಟದ ಕಾಲುವೆಗೆ ಜ.21ರಿಂದ 31ವರೆಗೆ 100 ಕ್ಯೂಸೆಕ್​ನಂತೆ ಮತ್ತು ಫೆಬ್ರವರಿ ಮತ್ತು ಮಾರ್ಚ್​ತಿಂಗಳಲ್ಲಿ 10 ದಿನಗಳಿಗೊಮ್ಮೆ 100 ಕ್ಯುಸೆಕ್​ನಂತೆ ಬಳ್ಳಾರಿ ನಗರ ಹಾಗೂ ಜಿಲ್ಲೆಯ ಇತರೆ ಕುಡಿವ ನೀರಿನ ಯೋಜನೆಗೆ ಹಾಗೂ ಕೆರೆ ತುಂಬಿಸಲು ಹರಿಸಲಾಗುವುದು.

ರಾಯ, ಬಸವ ಕಾಲುವೆಗಳಿಗೆ ವಿಜಯನಗರ ಜಿಲ್ಲೆಗೆ ಹಂಚಿಕೆಯಾದ 0.500 ಟಿಎಂಸಿ ನೀರಿನಲ್ಲಿ ಜ.21ರಿಂದ ಮೇ 30 ವರೆಗೆ 100 ಕ್ಯುಸೆಕ್​ನಂತೆ ಆನ್​/ಆಫ್​ ಪದ್ಧತಿಯಡಿ ಕುಡಿಯುವ ನೀರು ಹರಿಸಲು ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗಿದೆ. ಸದ್ಯ ಜಲಾಶಯದಲ್ಲಿ 10ಟಿಎಂಸಿ ಅಡಿ ನೀರು ಸಂಗ್ರಹವಿದೆ. ಎಡದಂಡೆ ವಿಜಯನಗರ ಕಾಲುವೆಗಳು 0 ಮೈಲ್​ನಿಂದ 11ಎ ವಿತರಣೆ ಕಾಲುವೆವರೆಗೆ ವ್ಯಾಒತಿ ಹೊಂದಿದೆ. 4 ಸಾವಿರ ಎಕರೆ ನಿಂತ ಬೆಳೆ ರಕ್ಷಣೆಗೆ ನೀರು ಬಿಡುವಂತೆ ರೈತರು ಕೆಲ ದಿನಗಳಿಂದ ಹೋರಾಟ ನಡೆಸಿದ್ದರು.

ಸಭೆಯಲ್ಲಿ ಸಚಿವರಾದ ಜಮೀರ್​ ಅಹಮದ್​ ಖಾನ್​, ಎನ್​.ಎಸ್​.ಬೋಸರಾಜು, ಬಿ.ನಾಗೇಂದ್ರ, ಶಾಸಕರಾದ ರಾವೇಂದ್ರ ಹಿಟ್ನಾಳ್​, ಗಾಲಿ ಜನಾರ್ದನ ರೆಡ್ಡಿ, ಮಾಜಿ ಶಾಸಕ ಬಸವರಾಜ ಹಿಟ್ನಾಳ್​, ಜಿಪಂ ಮಾಜಿ ಅಧ್ಯಕ್ಷ ರಾಜಶೇಖರ ಹಿಟ್ನಾಳ್​, ಜನಾರ್ದನ ಹುಲಿಗಿ ಇತರರಿದ್ದರು.

ರೈತರ ಸಭೆ ಜ.20ರ0ದು: ನೀರು ಬಿಡುಗಡೆ ಹಿನ್ನೆಲೆಯಲ್ಲಿ ವಿಜಯನಗರ ಕಾಲುವೆ ವ್ಯಾಪ್ತಿ ರೈತರು ಜ.20ರ0ದು ಶಿವಪುರದ ರಾಮ ಮಂದಿರದಲ್ಲಿ ಸಭೆ ಕರೆದಿದ್ದಾರೆ. ಆನ್​/ಆ್​ ಪದ್ಧತಿ ಸೂಚಿಸಿದ್ದು, ಕುಡಿವ ನೀರಿನೊಂದಿಗೆ ಬೆಳೆಗಳಿಗೆ ನೀರು ಹರಿಸಲು ಸಭೆಯಲ್ಲಿ ತೀರ್ಮಾನಿಸಲಾಗಿದೆ. ಹೀಗಾಗಿ ನೀರು ಬಳೆಕ ವಿಧಾನ, ಆಗುವ ಸಮಸ್ಯೆಗಳು, ಬೇಕಾದ ಬದಲಾವಣೆ, ರೈತರ ಸಹಕಾರ ಕೋರುವ ಸಂಬಂಧ ಸಭೆಯಲ್ಲಿ ಚರ್ಚೆ ಆಗಲಿದೆ.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net