

ಕೊಪ್ಪಳ: ತಾಲೂಕಿನ ಹುಲಿಗಿಯ ಶಕ್ತಿ ದೇವತೆ ಹುಲಿಗೆಮ್ಮ ದೇವಸ್ಥಾನ ಸಂಪರ್ಕಿಸುವ ರಸ್ತೆಯಲ್ಲಿನ ಅಂಗಡಿ ತೆರವು ಕಾರ್ಯಾಚರಣೆ ಮುಂದುವರೆದಿದೆ. ಭಕ್ತರ ಸಂಖ್ಯೆಗೆ ತಕ್ಕಂತೆ ಅಗತ್ಯ ಭದ್ರತೆ ನೆರವು ಪಡೆಯದ ಪ್ರಾಧಿಕಾರ ಅಭಿವೃದ್ಧಿ ಅಧಿಕಾರಿ ಪ್ರಕಾಶ್ ರಾವ್ ಗೆ ಡಿಸಿ ಡಾ.ಸುರೇಶ ಇಟ್ನಾಳ ಖಡಕ್ ಎಚ್ಚರಿಕೆ ನೀಡಿದ್ದಾರೆ.
ಕಳೆದ ಮಂಗಳವಾರ ಸೀಗೆ ಹುಣ್ಣಿಮೆ ಅಂಗವಾಗಿ 4 ಲಕ್ಷ ಭಕ್ತರು ಹುಲಿಗಿಗೆ ಆಗಮಿಸಿದ್ದರು. ಈ ವೇಳೆ ಅಗತ್ಯ ಪೊಲೀಸ್ ಭದ್ರತೆ, ಟ್ರಾಫಿಕ್ ಸೂಚನೆಗಳನ್ನು ನೀಡದ ಕಾರಣ ನೂಕುನುಗ್ಗಲು ಉಂಟಾಯಿತು. ಭಕ್ತರು ನಡೆದು ತಡರಳಲೂ ಪರದಾಡಿದ ಸ್ಥಿತಿ ಬಂದೊದಗಿತು. ಈ ಬೆನ್ನಲ್ಲೆ ಎಚ್ಚೆತ್ತ ಜಿಲ್ಲಾಡಳಿತ ದೇವಾಲಯ ಸಂಪರ್ಕಿಸುವ ರಸ್ತೆಗಳಲ್ಲಿನ ಅಕ್ರಮ ಅಂಗಡಿಗಳ ತೆರವಿಗೆ ಮುಂದಾಗಿದೆ. ಗುರುವಾರ ಕಾರ್ಯಾಚರಣೆ ಆರಂಭವಾಗಿದ್ದು ಶುಕ್ರವಾರವೂ ಮುಂದುವರೆಯಿತು.
ಡಿಸಿ ಸ್ಥಳದಲ್ಲಿದ್ದು ಕಾರ್ಯಾಚರಣೆ ಪರಿಶೀಲಿಸಿದರು. ಅಂಗಡಿಕಾರರ ಮನ ಒಲಿಸಿ ತೆರವು ಮಾಡಲಾಯಿತು.
ಸಮಿತಿ ರಚನೆ: ಅಂಗಡಿಗಳ ತೆರವಿಗೆ ಜಿಲ್ಲಾಧಿಕಾರಿ ಡಾ.ಸುರೇಶ ಇಟ್ನಾಳ ಸಮಿತಿ ರಚಿಸಿ ಆದೇಶಿಸಿದ್ದಾರೆ. ಗ್ರಾಪಂ ವ್ಯಾಪ್ತಿಯಲ್ಲಿ ಬರುವ ಮಳಿಗೆ ಹಾಗೂ ಇತರ ಆಸ್ತಿಗಳ ತಡರವಿಗೆ ಎಡಿಸಿ ಸಿದ್ರಾಮೇಶ್ವರ ನೇತೃತ್ವದ ತಂಡ ಹಾಗೂ ದೇವಸ್ಥಾನ ಮಳಿಗೆ, ದೇವಾಲಯ ವ್ಯಾಪ್ತಿ ರಸ್ತೆಗಳಿಗೆ ಹೊಂದಿಕೊಂಡ ಅತಿಕ್ರಮಣ ತೆರವಿಗೆ ಉಪ ವಿಭಾಗಾಧಿಕಾರಿ ಕ್ಯಾ.ಮಹೇಶ ಮಾಲಗಿತ್ತಿ ಅಧ್ಯಕ್ಷತೆಯಲ್ಲಿ ಸಮಿತಿ ರಚಿಸಲಾಗಿದೆ.
ಇಒಗೆ ತರಾಟೆ : ದೇವಸ್ಥಾನಕ್ಕೆ ಪ್ರತಿ ಮಂಗಳವಾರ, ಶುಕ್ರವಾರ ಹಾಗೂ ಹುಣ್ಣಿಮೆ ದಿನಗಳಂದು ಲಕ್ಷಾಂತರ ಭಕ್ತರು ಬರುತ್ತಾರೆ. ಅವರಿಗೆ ಅಗತ್ಯ ಸೌಕರ್ಯ, ಭದ್ರತೆ ಒದಗಿಸುವುದು ಪ್ರಾಧಿಕಾರದ ಜವಾಬ್ದಾರಿ. ಮಂಗಳವಾರ ಹುಣ್ಣಿಮೆ ಅಂಗವಾಗಿ ಬರುವ ಭಕ್ತರ ಸಂಖ್ಯೆಗೆ ತಕ್ಕಂತೆ ಭದ್ರತೆ ನೀಡುವಂತೆ ಇಒ ಪ್ರಕಾಶ ರಾವ್ ಪೊಲೀಸರಿಗೆ ತಿಳಿಸಿಲ್ಲ. ಪರಿಣಾಮ ನೂಕುನುಗ್ಗಲು ಉಂಟಾಗಿ ಅಪಾಯ ಎದುರಾಗಿತ್ತು. ಇದರಿಂದ ಗರಂ ಆದ ಜಿಲ್ಲಾಧಿಕಾರಿಗಳು ಇಒಗೆ ಖಡಕ್ ಎಚ್ಚರಿಕೆ ನೀಡಿದ್ದಾರೆ. ಒಂದೇ ಅವಘಡ ನಡೆದರೂ ನಿಮ್ಮನ್ನೆ ಹೊಣೆ ಮಾಡಲಾಗುವುದು. ಭಕ್ತರ ಸಂಖ್ಯೆಗೆ ತಕ್ಕಂತೆ ಪೊಲೀಸ್ ನೆರವು ಪಡೆಯಲು ಗೊತ್ತಾಗುವುದಿಲ್ಲವಾ ಎಂದು ತರಾಟೆ ತೆಗೆದುಕೊಂಡರು.