ಹುಲಿಗಿಗೆ ಹರಿದು ಬಂದ ಭಕ್ತಸಾಗರ

district koppal huligi temple godess
Published on

ಕೊಪ್ಪಳ: ಗೌರಿ ಹುಣ್ಣಿಮೆ ಅಂಗವಾಗಿ ತಾಲೂಕಿನ ಹುಲಿಗಿ ಗ್ರಾಮದ ಹುಲಿಗೆಮ್ಮ ದೇವಿ ದೇವಸ್ಥಾನಕ್ಕೆ ಶುಕ್ರವಾರ ಲಕ್ಷಾಂತರ ಭಕ್ತರು ಭೇಟಿ ನೀಡಿ ದೇವಿ ದರ್ಶನ ಪಡೆದರು.

ನಾಡಿನ ಶಕ್ತಿ ದೇವಿ ಹುಲಿಗೆಮ್ಮ ದೇವಿಗೆ ನಾಡಿನಾದ್ಯಂತವಲ್ಲದೇ, ವಿವಿಧ ರಾಜ್ಯಗಳಲ್ಲಿ ಅಪಾರ ಭಕ್ತಗಣವಿದೆ. ಶುಕ್ರವಾರ, ಮಂಗಳವಾರ ಸೇರಿ ವಿಶೇಷ ದಿನಗಳಲ್ಲಿ ಭಕ್ತರ ಸಂಖ್ಯೆ ಹೆಚ್ಚಿರುವುದು ಸಹಜ. ಶುಕ್ರವಾರ ಗೌರಿ ಹುಣ್ಣಿಮೆ ನಿಮಿತ್ತ ಅಪಾರ ಭಕ್ತರು ಗುರುವಾರ ರಾತ್ರಿಯಿಂದಲೇ ಹುಲಿಗಿಗೆ ಆಗಮಿಸಿದರು. ವಿವಿಧ ಜಿಲ್ಲೆಗಳು, ಆಂಧ್ರ, ತೆಲಂಗಾಣ, ಮಹಾರಾಷ್ಟ್ರ ಸೇರಿ ಇತರ ರಾಜ್ಯಗಳಿಂದ ಬಂದಿದ್ದರು. ಬೆಳಗ್ಗೆಯಿಂದಲೇ ದೇವಿ ದರ್ಶನಕ್ಕೆ ಅಪಾರ ಜನರು ಸರತಿಯಲ್ಲಿ ಕಾದರು.

ಗರ್ಭ ಗುಡಿ ಹೊರತು ಪಡಿಸಿ ದೇವಾಲಯ ಆವರಣದವರೆಗೂ ಭಕ್ತರ ಸಾಲು ಕಂಡುಬಂತು. ಬಿಸಿಲ ಕಾರಣ ನೆರಳಿನ ವ್ಯವಸ್ಥೆ ಕಲ್ಪಿಸಲಾಯಿತು. ಶಕ್ತಿ ಯೋಜನೆ ಪರಿಣಾಮ ಮಹಿಳಾ ಭಕ್ತರೇ ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಿದ್ದು ಕಂಡುಬಂತು. ರಾತ್ರಿವರೆಗೆ ದರ್ಶನಕ್ಕೆ ವಿಶೇಷ ವ್ಯವಸ್ಥೆ ಮಾಡಲಾಯಿತು. ದರ್ಶನ ಪಡೆದ ಭಕ್ತರು ಪ್ರಸಾದ ಸವಿದು ತೆರಳಿದರು. ದೇವಿಗೆ ವಿಶೇಷ ಅಲಂಕಾರ, ತಳಿರು, ತೋರಣಗಳಿಂದ ಸಿಂಗರಿಸಲಾಗಿತ್ತು.

ಪಕ್ಕದಲ್ಲಿನ ತುಂಗಭದ್ರಾ ನದಿಯಲ್ಲಿ ಪುಣ್ಯ ಸ್ನಾನ ಮಾಡಿದ ಭಕ್ತರು ದರ್ಶನ, ಪೂಜೆ ನೆರವೇರಿಸಿದರು. ಹರಕೆ ಹೊತ್ತ ಕೆಲವರು ಹರಕೆ ತೀರಿಸಿದರು. ಆವರಣದಲ್ಲಿ ಅಲ್ಲಲ್ಲಿ ಅಡುಗೆ ಮಾಡಿಕೊಂಡು ಸಿಹಿ ಊಟ ಸವಿದರು. ಬಂದ ಭಕ್ತರಿಗೆ ದೇವಾಲಯದಿಂದಲೇ ಕುಡಿವ ನೀರು, ಬಳಕೆ ನೀರು ಇತರ ಸೌಲಭ್ಯ ಕಲ್ಪಿಸಲಾಯಿತು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net