

ಕೊಪ್ಪಳ: ಪ್ರಸಿದ್ಧ ಧಾರ್ಮಿಕ ಕ್ಷೇತ್ರ ಹುಲಿಗೆಮ್ಮ ಮೇ 13ರಿಂದ ಆರಂಭವಾಗಲಿದ್ದು ಬರುವ ಭಕ್ತರಿಗೆ ಸಮರ್ಪಕ ವ್ಯವಸ್ಥೆ ಕಲ್ಪಿಸುವಂತೆ ಜಿಲ್ಲಾಧಿಕಾರಿ ನಲಿನ್ ಅತುಲ್ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಹುಲಿಗೆಮ್ಮ ಜಾತ್ರೋತ್ಸವ ಅಂಗವಾಗಿ ಶುಕ್ರವಾರ ಹಮ್ಮಿಕೊಂಡಿದ್ದ ಪೂರ್ವಭಾವಿ ಸಭೆಯಲ್ಲಿ ಮಾತನಾಡಿದರು.
ಕುಡಿವ ನೀರು, ನೆರಳು, ಪಾರ್ಕಿಂಗ್ ಕಲ್ಪಿಸಿ. ಸಂಪರ್ಕ ರಸ್ತೆ ಹಾಗೂ ಬೈಪಾಸ್ ರಸ್ತೆಗಳನ್ನು ಸರಿಪಡಿಸಿ. ತಾತ್ಕಾಲಿಕ ಸಾಮೂಹಿಕ ಸ್ನಾನಗೃಹ, ಶೌಚಗೃಹ ನಿರ್ಮಿಸಿ. ಜಾತ್ರಾ ಅವಧಿಯಲ್ಲಿ ನಿರಂತರ ವಿದ್ಯುತ್ ಸರಬರಾಜು ಮಾಡಿ. ದೇವಸ್ಥಾನದ ಗುಡಿ-ಗೋಪುರಗಳಿಗೆ ವಿದ್ಯುತ್ ಅಲಂಕಾರ ಮಾಡಿ. ಸಿಸಿಟಿವಿ ಕ್ಯಾಮೆರಾ ಅಳವಡಿಸಿ, ಅಗತ್ಯ ಬಂದೋಬಸ್ತ್ ಕಲ್ಪಿಸಿ. ತುಂಗಭದ್ರಾ ಜಲಾಶಯದಿಂದ ನದಿಗೆ ನೀರು ಬಿಡುಗಡೆಗೆ ಕ್ರಮ ಕೈಗೊಳ್ಳಿ. ಜಾತ್ರೆ ಅವಧಿಯಲ್ಲಿ ಸಾರಿಗೆ ಬಸ್ ಸೇವೆ ಹೆಚ್ಚಿಸಿ. ಬಸ್ ಮೇಲೆ ಜಿಲ್ಲೆಯ ಪ್ರವಾಸಿ ತಾಣಗಳ ಮಾಹಿತಿ ಪೋಸ್ಟರ್ ಬಿತ್ತರಿಸಿ. ತಡೆರಹಿತ ರೈಲುಗಳು ಮುನಿರಾಬಾದ್ ನಿಲ್ಲಿಸುವಂತೆ ರೈಲ್ವೆ ಅಧಿಕಾರಿಗಳಿಗೆ ಪತ್ರ ಬರೆಯಿರಿ. ಸ್ವಚ್ಛತೆಗೆ ಆದ್ಯತೆ ನೀಡಿ. ಹುಲಿಗಿ ಗ್ರಾಪಂ ಅಗತ್ಯ ಸಹಕಾರ ನೀಡಬೇಕು. ದೇವಸ್ಥಾನ ಸಂಪರ್ಕಿಸುವ ರಸ್ತೆ ುಟ್ಪಾತ್ ಮೇಲೆ ಅಂಗಡಿಗಳನ್ನು ಇಡದಂತೆ ನೋಡಿಕೊಳ್ಳಿ. ಪ್ರಾಣಿ ಬಲಿಗೆ ಅವಕಾಶ ನೀಡಬೇಡಿ. ರಥಕ್ಕೆ ಲೋಕೋಪಯೋಗಿ ಇಲಾಖೆಯಿಂದ ಅರ್ಹತೆ ಪ್ರಮಾಣ ಪತ್ರ ಪಡೆಯಿರಿ. ಅಗ್ನಿಶಾಮಕ ವಾಹನ ಕಾಯ್ದಿರಿಸುವಂತೆ ಸಂಬಂಧಿಸಿದ ಅಧಿಕಾರಿಗಳಿಗೆ ಸೂಚಿಸಿದರು.
ಸಂಸದ ರಾಜಶೇಖರ ಹಿಟ್ನಾಳ ಮಾತನಾಡಿ, ಜಾತ್ರೆಗೆ ವಿವಿಧ ರಾಜ್ಯದಿಂದ ಲಾಂತರ ಭಕ್ತರು ಆಗಮಿಸುತ್ತಾರೆ. ಅವರಿಗೆ ಅವಶ್ಯ ಮೂಲ ಸೌಕರ್ಯ ಕಲ್ಪಿಸಿ. ಟ್ಯಾಂಕರ್ ಬದಲು ಬೋರ್ವೆಲ್ ನೀರು ಪೂರೈಕೆಗೆ ಕ್ರಮ ಕೈಗೊಳ್ಳಿ. ಬಸ್ ಸಂಖ್ಯೆ ಹೆಚ್ಚಿಸಿ. ಬಸ್ ಸಂಚಾರಕ್ಕೆ ಗುರುತಿಸಿದ ಮಾರ್ಗಗಳನ್ನು ಪರೀಸಿ. ಚಾಲಕರಿಗೆ ಮಾಹಿತಿ ನೀಡಿ ಎಂದು ತಿಳಿಸಿದರು.
ಶಾಸಕ ರಾವೇಂದ್ರ ಹಿಟ್ನಾಳ ಮಾತನಾಡಿ, ವಿಜೃಂಭಣೆಯಿಂದ ಜಾತ್ರೆ ನಡೆಸಬೇಕು. ಹಿಂದಿಗಿಂತಲೂ ಈ ವರ್ಷ ಅಧಿಕ ಜನ ಬರುವ ನಿರೀೆ ಇದೆ. ವ್ಯವಸ್ಥಿತವಾಗಿ ಕಾರ್ಯಕ್ರಮ ಆಯೋಜಿಸಿ. ಸ್ವಚ್ಛತೆಗೆ ಕೊಪ್ಪಳ ತಾಪಂ, ನಗರಸಭೆ ಯಂತ್ರಗಳನ್ನು ಬಳಕೆ ಮಾಡಿ ಎಂದು ಸಲಹೆ ನೀಡಿದರು.
ಶ್ರೀ ಹುಲಿಗೆಮ್ಮ ದೇವಿ ಕ್ಷೇತ್ರ ಅಭಿವೃದ್ಧಿ ಪ್ರಾಧಿಕಾರದ ಕಾರ್ಯದರ್ಶಿ ಎಂ.ಎಚ್.ಪ್ರಕಾಶರಾವ್ ಮಾತನಾಡಿ, ಮೇ 21 ರಂದು ಸಂಜೆ 5.30ಕ್ಕೆ ರಥೋತ್ಸವ ನಡೆಯಲಿದೆ. ಮೇ 13 ರಿಂದ 24ವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಜರುಗಲಿವೆ. ಜಾತ್ರೋತ್ಸವಕ್ಕೆ ಬೇಕಾದ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ನಗರಸಭೆ ಅಧ್ಯಕ್ಷ ಅಮ್ಜದ್ ಪಟೇಲ್, ಜಿಪಂ ಯೋಜನಾ ನಿರ್ದೇಶಕ ಪ್ರಕಾಶ ವಿ., ಡಿಎಚ್ಒ ಡಾ.ಟಿ.ಲಿಂಗರಾಜು, ಪಶುಪಾಲನಾ ಇಲಾಖೆ ಉಪನಿರ್ದೇಶಕ ಡಾ.ಪಿ.ಎಂ.ಮಲ್ಲಯ್ಯ, ತಹಸೀಲ್ದಾರ ವಿಠ್ಠಲ್ ಚೌಗಲಾ, ತಾಪಂ ಇಒ ದುಂಡಪ್ಪ ತುರಾದಿ ಇತರರಿದ್ದರು.