

ಕೊಪ್ಪಳ: ನಾಡಿನ ಶಕ್ತಿ ದೇವತೆ ಹುಲಿಗಿಯ ಹುಲಿಗೆಮ್ಮ ದೇವಿ ಜಾತ್ರೋತ್ಸವ ಮಂಗಳವಾರದಿಂದ ಆರಂಭಗೊಂಡಿದೆ. ಮೇ 21ರಂದು ಮಹಾರಥೋತ್ಸವ ಇದ್ದು, ಮಹಾದಾಸೋಹಕ್ಕೆ ಚಾಲನೆ ನೀಡಲಾಗಿದೆ.
ನಾಡಿನ ಶಕ್ತಿ ಪೀಠಗಳಲ್ಲಿ ಒಂದಾದ ಹುಲಿಗಿ ಹುಲಿಗೆಮ್ಮ ದೇವಿ ಜಾತ್ರೋತ್ಸವ ಈ ಭಾರಿ ವಿಭಿನ್ನವಾಗಿ ಆಚರಿಸಲಾಗುತ್ತಿದೆ. ಈಗಾಗಲೇ ಎಲ್ಲ ಸಿದ್ಧತೆಗಳನ್ನು ಮಾಡಿಕೊಂಡಿದ್ದು ದೇವಾಲಯ ಆವರಣದಲ್ಲಿ ಜಾತ್ರೆ ಕಳೆಗಟ್ಟಿದೆ. ಭಕ್ತರ ಸಂಖ್ಯೆ ದಿನದಿಂದ ದಿನಕ್ಕೆ ಏರಿಕೆಯಾಗುತ್ತಿದೆ. ಗವಿಮಠದ ಮಾದರಿಯಂತೆ ಈ ಬಾರಿ ಭಕ್ತರಿಗಾಗಿ ತಿಂಗಳ ಕಾಲ ಮಹಾ ದಾಸೋಹ ಹಮ್ಮಿಕೊಳ್ಳಲಾಗಿದೆ. ಸುತ್ತಲಿನ ಗ್ರಾಮದ ಭಕ್ತರು ರೊಟ್ಟಿ, ಸಿಹಿ ತಿನಿಸು ಸೇರಿ ಇತರ ಪದಾರ್ಥಗಳನ್ನು ಅರ್ಪಿಸುತ್ತಿದ್ದಾರೆ. ಸೋಮವಾರ ಹುಣ್ಣಿಮೆ ಹಾಗೂ ಮಂಗಳವಾರ ವಾರದ ದಿನವಾಗಿದ್ದರಿಂದ ಸಾಮಾನ್ಯ ದಿನಗಳಿಗಿಂತ ಹೆಚ್ಚಿನ ಭಕ್ತರು ಕಂಡು ಬಂದರು.
ಮಳೆಗಾಲ ಸಮೀಪಿಸಿದ್ದ ಮಹಾದಾಸೋಹಕ್ಕೆ ತೊಂದರೆ ಆಗದಂತೆ 36 ಲಕ್ಷ ರೂ. ವೆಚ್ಚದಲ್ಲಿ ಜರ್ಮನ್ ಮಾದರಿ ಟೆಂಟ್ ಅಳವಡಿಸಲಾಗಿದೆ. ಭದ್ರತೆಗೆ ಐವರು ಸಿಪಿಐ, 14 ಪಿಎಸ್ಐ, 36 ಎಎಸ್ಐ ಹಾಗೂ ಇತರ ಪೊಲೀಸ್ ಸಿಬ್ಬಂದಿ ನಿಯೋಜಿಸಲಾಗಿದೆ. ಭಕ್ತರಿಗಾಗಿ 190 ತಾತ್ಕಾಲಿಕ ಶೌಚಗೃಹ, ಸ್ನಾನ ಗೃಹ, ಕುಡಿವ ನೀರು, ಪಾರ್ಕಿಂಗ್ ನಿರ್ಮಿಸಲಾಗಿದೆ. ರಸ್ತೆಗಳನ್ನು ರಿಪೇರಿ ಮಾಡಿದ್ದು ಸುಗಮ ಸಂಚಾರಕ್ಕೆ ಅವಕಾಶ ಕಲ್ಪಿಸಿಕೊಡಲಾಗಿದೆ.
ದಾಸೋಹಕ್ಕೆ ಚಾಲನೆ: ಈ ಭಾಗದ ಸುಪ್ರಸಿದ್ಧ ಶ್ರೀ ಹುಲಿಗೆಮ್ಮ ದೇವಿ ಜಾತ್ರಾ ಮಹೋತ್ಸವ ಇಂದಿನಿಂದ ಪ್ರಾರಂಭಗೊಂಡಿದ್ದು ವಿಶೇಷವಾಗಿ ಈ ಬಾರಿ ಒಂದು ತಿಂಗಳ ಕಾಲ ಪ್ರತಿದಿನ ಭಕ್ತರಿಗೆ ಪ್ರಸಾದ ವ್ಯವಸ್ಥೆ ಮಾಡಲಾಗಿದೆ ಎಂದು ಶಾಸಕ ರಾವೇಂದ್ರ ಹಿಟ್ನಾಳ ಹೇಳಿದರು.
ಮಂಗಳವಾರ ದಾಸೋಹಕ್ಕೆ ಚಾಲನೆ ನೀಡಿ ಮಾತನಾಡಿದರು. ದೇವಾಲಯ ಆವರಣದಲ್ಲಿ ಅಚ್ಚುಕಟ್ಟಾಗಿ ಪ್ರಸಾದದ ವ್ಯವಸ್ಥೆ ಮಾಡಲಾಗಿದೆ. ಬೂಂದಿ, ಜಿಲೇಬಿ, ಮೈಸೂರ್ ಪಾಕ, ಹುಗ್ಗಿ, ಮಿರ್ಚಿ, ರೊಟ್ಟಿ ಮತ್ತು ಅನ್ನ ಸಾಂಬಾರ್ ಇರಲಿದೆ ಎಂದರು.
ಮಾಜಿ ಸಂಸದ ಸಂಗಣ್ಣ ಕರಡಿ, ಪ್ರಮುಖರಾದ ವಿ.ಆರ್.ಪಾಟೀಲ್, ಪಾಲಾಕ್ಷಪ್ಪ ಗುಂಗಾಡಿ, ಬಾಲಚಂದ್ರನ್, ಯಂಕಪ್ಪ ಹೊಸಳ್ಳಿ, ವೆಂಕಟೇಶ ಕಂಪಸಾಗರ, ಈರಣ್ಣ ಹುಲಿಗಿ, ವಿಶ್ವನಾಥ ರಾಜು, ಸಿಇಒ ಪ್ರಕಾಶರಾವ್ ಎಂ.ಎಚ್. ಇದ್ದರು.