ಹಾಸ್ಟೆಲ್​ ಸ್ವಚ್ಛವಾಗಿರದಿದ್ದರೆ ಕ್ರಮ, ಡಿಸಿ ನಲಿನ್​ ಅತುಲ್​ ಎಚ್ಚರಿಕೆ

hostel workers training program koppal
ಕೊಪ್ಪಳದಲ್ಲಿ ಗುರುವಾರ ನಡೆದ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿದ್ದ ವಸತಿ ನಿಲಯದ ನೌಕರರು.
Published on

ಕೊಪ್ಪಳ: ಹಾಸ್ಟೆಲ್​ಗಳಲ್ಲಿ ಸ್ವಚ್ಛತೆ ಕಾಪಾಡಿ. ಮಕ್ಕಳ ಆರೋಗ್ಯ ರಕ್ಷಣೆಗೆ ಮೊದಲ ಆದ್ಯತೆ ನೀಡಿ ಎಂದು ಜಿಲ್ಲಾಧಿಕಾರಿ ನಲಿನ್​ ಅತುಲ್​ ನೌಕರರಿಗೆ ಸೂಚಿಸಿದರು.

ನಗರದ ಜಿಪಂ ಜೆ.ಎಚ್​.ಪಟೇಲ್​ ಸಭಾಂಗಣದಲ್ಲಿ ವಸತಿ ಶಾಲೆಗಳ ಕಾಯಂ, ಗುತ್ತಿಗೆ ಆಧಾರದ ಡಿ ಗ್ರೂಪ್​ ನೌಕರರಿಗೆ ಗುರುವಾರ ಹಮ್ಮಿಕೊಂಡಿದ್ದ ತರಬೇತಿ ಕಾರ್ಯಾಗಾರ ಉದ್ಘಾಟಿಸಿ ಮಾತನಾಡಿದರು.

ಹಾಸ್ಟೆಲ್​ನಲ್ಲಿ ಸ್ವಚ್ಛತೆ ಕಾಪಾಡದಿದ್ದರೆ ವಾರ್ಡನ್​ಗಳ ವಿರುದ್ಧ ಕ್ರಮ ಕೈಗೊಳ್ಳಲಾಗುವುದು. ಮಕ್ಕಳಿಗೆ ಶಿಕ್ಷಣದಷ್ಟೇ ಆರೋಗ್ಯ ಮುಖ್ಯ. ಆಹಾರದಲ್ಲಿ ಗುಣಮಟ್ಟದ, ಸ್ವಚ್ಛತೆ ಇರಲಿ. ಅಧಿಕಾರಿಗಳು ನೀಡುವ ಸೂಚನೆ ಸರಿಯಾಗಿ ಪಾಲಿಸಿ. ಸಮಸ್ಯೆಗಳಾದಲ್ಲಿ ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತನ್ನಿ. ಪರಿಹಾರ ಪಡೆದುಕೊಂಡು ಮುಂದಿನ ಕ್ರಮವಹಿಸುವಂತೆ ನಿರ್ದೇಶನ ನೀಡಿದರು.

ಜಿಪಂ ಸಿಇಒ ರಾಹುಲ್​ ರತ್ನಂ ಪಾಂಡೆಯ ಮಾತನಾಡಿ, ಹಾಸ್ಟೆಲ್​ ಒಳಾಂಗಣ, ಹೊರಾಂಗಣ ಶುಭ್ರವಾಗಿರಲಿ. ಶೌಚಗೃಹ, ಸ್ನಾನಗೃಹ ಶುಚಿಗೊಳಿಸಿ. ಗುಣಮಟ್ಟದ ಆಹಾರ ನೀಡಿ. ನೀವು ಮೊದಲು ವೈಯಕ್ತಿಕ ಸ್ವಚ್ಛತೆ ಕಾಪಾಡಿಕೊಳ್ಳಿ. ಡಿಸಿ ಹಾಗೂ ನಾನು ಆಗಾಗ ಭೇಟಿ ನೀಡುತ್ತೇವೆ. ಲೋಪವಾದಲ್ಲಿ ಕ್ರಮ ಕೈಗೊಳ್ಳಲಾಗುವಯದೆಂದು ಎಚ್ಚರಿಸಿದರು.

ಸಮಾಜ ಕಲ್ಯಾಣ ಇಲಾಖೆ ಉಪ ನಿರ್ದೇಶಕ ರಾಜು ತಳವಾರ, ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ಶಿವಾನಂದ ವಿ.ಪಿ. ಮಾತನಾಡಿದರು. ಇತ್ತೀಚೆಗೆ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿ ಕೆ.ಪಿ.ಮೋಹನರಾಜ್​ ಕುಕನೂರು ಅಂಬೇಡ್ಕರ್​ ಸರ್ಕಾರಿ ಪಿಯು ವಸತಿ ಶಾಲೆಗೆ ಭೇಟಿ ನೀಡಿ ಆಹಾರ ಸೇವಿಸಿ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಹೀಗಾಗಿ ನಿಲಯ ಪಾಲಕರಿಗೆ ಸಿಇಒ ಸಂವಿಧಾನ ಪುಸ್ತಕ ನೀಡಿ ಮೆಚ್ಚುಗೆ ಸೂಚಿಸಿದರು. ಆಹಾರ ಸುರಕ್ಷತಾಧಿಕಾರಿ ಕೃಷ್ಣಾ ತರಬೇತಿ ನೀಡಿದರು. ವಸತಿ ಶಾಲೆಗಳ ನಿಲಯ ಪಾಲಕರು, ನೌಕರರು ಇದ್ದರು.

ವಿಜಯವಾಣಿ ನಂ.1 ದಿನ ಪತ್ರಿಕೆ | Vijayavani | Kannada News
www.vijayavani.net