

ಕೊಪ್ಪಳ: ನಗರದಲ್ಲಿ ಇದೇ ಮೊದಲ ಬಾರಿಗೆ ದೊಟ್ಟಮಟ್ಟದಲ್ಲಿ ಹೋಳಿ ಆಚರಣೆ ನಡೆಯಲಿದೆ. ಇದಕ್ಕಾಗಿ ತಾಲೂಕು ಕ್ರೀಡಾಂಗಣ ಸಜ್ಜುಗೊಂಡಿದೆ.
ದೇಶದ ಎಲ್ಲೆಡೆ ಹೋಳಿಯನ್ನು ಅತ್ಯಂತ ವಿಜೃಂಭಣೆ, ಸಂಭ್ರಮದಿಂದ ಆಚರಿಸಲಾಗುತ್ತದೆ. ಅದೇ ಮಾದರಿಯಲ್ಲಿ ಕೊಪ್ಪಳದಲ್ಲಿ ಪ್ರಥಮ ಬಾರಿಗೆ ವೈಭವದಿಂದ ಹಬ್ಬಾಚರಣೆ ಯೋಜಿಸಲಾಗಿದೆ. ಎಲ್ಲ ವರ್ಗದ ಜನರು, ಪುರುಷ, ಮಹಿಳೆ, ಮಕ್ಕಳು ಭಾಗಿಯಾಗಬಹುದು. ಉನ್ನತ ಮಟ್ಟದ ಡಿಜೆ ಸೌಂಡ್, ರೇನ್ ಡಾನ್ಸ್ ಹಮ್ಮಿಕೊಳ್ಳಲಾಗಿದೆ. ಇದಕ್ಕಾಗಿ ಪ್ರತ್ಯೇಕ ವ್ಯವಸ್ಥೆ ಮಾಡಿದ್ದು, ಎಲ್ಲ ಸಿದ್ಧತೆಗಳನ್ನು ಗುರುವಾರ ಪೂರ್ಣಗೊಳಿಸಲಾಗಿದೆ. ಸ್ಥಳದಲ್ಲೇ ಸಾವಯವ ಬಣ್ಣ ಉಚಿತವಾಗಿ ಸಿಗಲಿದೆ. ಬಂದ ಜನರಿಗೆ ಬೆಳಗಿನ ಉಪಾಹಾರ, ಮಧ್ಯಾಹ್ನದ ಊಟ ಇರಲಿದೆ. ಬೆಳಗ್ಗೆ 7ರಿಂದ ಮಧ್ಯಾಹ್ನ 2 ಗಂಟೆವರೆಗೆ ಆಚರಣೆಗೆ ಹೋಳಿ ಆಚರಣಗೆ ಅವಕಾಶ ಮಾಡಿಕೊಡಲಾಗಿದೆ.
ಮದ್ಯ ಮಾರಾಟ ನಿಷೇಧ: ಹೋಳಿ ಆಚರಣೆ ಹಿನ್ನೆಲೆಯಲ್ಲಿ ಮಾ.13ರಿಂದ 15ವರೆಗೆ ಜಿಲ್ಲೆಯಲ್ಲಿ ಮದ್ಯ ಮಾರಾಟ ನಿಷೇಧಿಸಿ ಡಿಸಿ ನಲಿನ್ ಅತುಲ್ ಆದೇಶಿಸಿದ್ದಾರೆ. ಕೊಪ್ಪಳ ನಗರ, ಮುನಿರಾಬಾದ್, ಆಳವಂಡಿ, ಕೊಪ್ಪಳ ಗ್ರಾಮೀಣ, ಕುಕನೂರು, ಗಂಗಾವತಿ ಗ್ರಾಮೀಣ, ತಾವರೆಗೇರಾ, ಹನುಮಸಾಗರ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮಾ.13ರ ಸಂಜೆ 5 ಗಂಟೆಯಿಂದ ಮಾ.14ರ ಮಧ್ಯರಾತ್ರಿಯವರೆಗೆ ಹಾಗೂ ಯಲಬುರ್ಗಾ, ಬೇವೂರು, ಗಂಗಾವತಿ ನಗರ, ಕಾರಟಗಿ, ಕನಕಗಿರಿ ಮತ್ತು ಕುಷ್ಟಗಿ ಪೋಲಿಸ್ ಠಾಣೆ ವ್ಯಾಪ್ತಿಯಲ್ಲಿ ಮಾ.14ರ ಸಂಜೆ 5 ಗಂಟೆಯಿಂದ ಮಾ.15ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ನಿಷೇಧಿಸಲಾಗಿದೆ. ಅಬಕಾರಿ ಉಪ ಆಯುಕ್ತರ ನೇತೃತ್ವದಲ್ಲಿ ತನಿಖಾ ತಂಡ ರಚಿಸಿದ್ದು ಅಕ್ರಮ ಮಾರಾಟ ಮೇಲೆ ನಿಗಾವಹಿಸಿದ್ದಾಗಿ ತಿಳಿಸಿದ್ದಾರೆ.