

ಕೊಪ್ಪಳ: ಹೋಳಿ ಹಿನ್ನೆಲೆಯಲ್ಲಿ ಮೊದಲ ಬಾರಿಗೆ ಕೊಪ್ಪಳದಲ್ಲಿ ರೇನ್ ಡಾನ್ಸ್, ಡಿಜೆ ಸದ್ದಿಗೆ ಜನಪ್ರತಿನಿಧಿಗಳು, ಯುವಕರು ಹೆಜ್ಜೆ ಹಾಕಿ ಸಂಭ್ರಮಿಸಿದ್ದು ಕಂಡುಬಂತು.
ತಾಲೂಕು ಕ್ರೀಡಾಂಗಣದಲ್ಲಿ ಮಹಿಳೆ, ಪುರುಷ ಹಾಗೂ ಮಕ್ಕಳಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಯಿತು. ಬೆಳಗ್ಗೆ 7ರಿಂದಲೇ ಯುವಕ, ಯುವತಿಯರು, ಮಕ್ಕಳು, ಮಹಿಳೆಯರು ಹೆಜ್ಜೆ ಹಾಕಿ ಸಂಭ್ರಮಿಸಿದರು. ಪರಸ್ಪರ ಬಣ್ಣ ಎರಚಿ ನಲಿದರು. ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಊಟದ ವ್ಯವಸ್ಥೆ ಮಾಡಲಾಯಿತು. ಸಾವಿರಾರು ಜನ ಏಕಕಾಲಕ್ಕೆ ಸೇರಿದ್ದರಿಂದ ಜನಸಂದಣಿ ಕಂಡುಬಂತು. ಪೊಲೀಸರು ಜನರ ನಿಯಂತ್ರಣಕ್ಕೆ ಹರಸಾಹಸಪಟ್ಟರು. ಸಂಜೆವರೆಗೂ ಜನ ಕುಣಿದು ಕುಪ್ಪಳಿಸಿದರು. ಸಂಸದ ರಾಜಶೇಖರ ಹಿಟ್ನಾಳ, ಶಾಸಕ ರಾವೇಂದ್ರ ಹಿಟ್ನಾಳ ಇತರರು ಭಾಗಿಯಾದರು.
ಸಣಾಪುರದಲ್ಲಿಲ್ಲ ರಂಗು : ವಿದೇಶಿಗರು ಸೇರಿ, ದೇಶದ ವಿವಿಧೆಡೆಯಿಂದ ಹೋಳಿ ಸಂಭ್ರಮ ಆಚರಣೆಗೆ ಸಣಾಪುರ, ಆನೆಗೊಂದಿ ಭಾಗಕ್ಕೆ ಬರುತ್ತಿದ್ದ ಜನರು ಈವರ್ಷ ಬರದ ಕಾರಣ ಈ ಭಾಗ ಜನರಿಲ್ಲದೇ ಬಿಕೋ ಎನ್ನುವಂತಿತ್ತು. ಇತ್ತೀಚೆಗೆ ನಡೆದ ಮಹಿಳೆಯರ ಸಾಮೂಹಿಕ ಅತ್ಯಾಚಾರ ಪ್ರಕರಣ ಅಂತಾರಾಷ್ಟ್ರೀಯ ಮಟ್ಟದಲ್ಲಿ ಕೆಟ್ಟ ಪರಿಣಾಮ ಬೀರಿದೆ. ವಿದೇಶಿಗರು ಸಣಾಪುರದತ್ತ ಮುಖ ಮಾಡಿಲ್ಲ. ಹೀಗಾಗಿ ಸ್ಥಳಿಯರಲ್ಲೂ ರಂಗಿನ ಹಬ್ಬದ ಗುಂಗು ಕಾಣಿಸಲಿಲ್ಲ.